ತಮಿಳು ನಟ ಧನುಷ್ ಚಿತ್ರವೊಂದಕ್ಕೆ ₹50 ಕೋಟಿ ಸಂಭಾವನೆ ಪಡಿತಾರೆ ಅನ್ನೋ ವಿಚಾರ ಇತ್ತೀಚೆಗೆ ಬಹಳ ದೊಡ್ಡದಾಗಿ ಸದ್ದು ಮಾಡಿತ್ತು. ಇದೀಗ ರಜನಿಕಾಂತ್ ಅಳಿಯ ಚೆನ್ನೈನಲ್ಲಿ ಕಟ್ಟಿಸುತ್ತಿರುವ ಬಂಗಲೆಯ ಬಜೆಟ್ ವಿಚಾರ ಎಲ್ಲರ ಹುಬ್ಬೇರಿಸಿದೆ. ಫೆಬ್ರವರಿಯಲ್ಲಿ ಧನುಷ್ ಚೆನ್ನೈನ ಪ್ರತಿಷ್ಠಿತ ಪೋಯಸ್ ಗಾರ್ಡನ್ ನಲ್ಲಿ ಮನೆ ಕಟ್ಟಿಸಲು ಭೂಮಿ ಪೂಜೆ ನೆರವೇರಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು. ಆ ಫೋಟೋಸ್ ಸಖತ್ ವೈರಲ್ ಆಗಿತ್ತು. 4 ಅಂತಸ್ತಿನ ಭವ್ಯ ಬಂಗಲೆ ಅಲ್ಲಿ ತಲೆ ಎತ್ತುತ್ತಿದ್ದು, ಇದಕ್ಕಾಗಿ ₹150 ಕೋಟಿ ಖರ್ಚು ಮಾಡುತ್ತಿದ್ದಾರೆ ಅಂತ ಸುದ್ದಿ ಹರಿದಾಡ್ತಿದೆ. ವಿಶೇಷ ಅಂದ್ರೆ ಧನುಷ್ ಹೊಸ ಬಂಗಲೆ ರಜನಿಕಾಂತ್ ಮನೆಯಿಂದ ಕೂಗಳತೆ ದೂರದಲ್ಲಿ ಇದೆಯಂತೆ. 19,000 ಚದರ ಅಡಿ ವಿಸ್ತೀರ್ಣದಲ್ಲಿ ಬಂಗಲೆ ನಿರ್ಮಾಣವಾಗಲಿದೆ.
ಧನುಷ್ ಪ್ರತಿವೊಂದು ಕೋಣೆಯನ್ನು ತಮ್ಮಿಷ್ಟದಂತೆ ವಿನ್ಯಾಸ ಮಾಡಿಸಿಕೊಳ್ಳುತ್ತಿದಾರೆ. ಚಿತ್ರವೊಂದಕ್ಕೆ 40ರಿಂದ 50 ಕೋಟಿ ಸಂಭಾವನೆ ಪಡೆಯುವ ನಟನಿಗೆ 150 ಕೋಟಿ ಬಂಗಲೆ ದೊಡ್ಡ ವಿಚಾರವೇ ಅಲ್ಲ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಗೃಹ ಪ್ರವೇಶದ ವೇಳೆಗೆ ಈ ಬಜೆಟ್ ಮತ್ತಷ್ಟು ಹೆಚ್ಚಾದರೂ ಅಚ್ಚರಿ ಪಡಬೇಕಿಲ್ಲ ಅಂತ ತಮಿಳು ಮಾಧ್ಯಮಗಳು ಹೇಳ್ತಿವೆ. ಇನ್ನು ಧನುಷ್ ಸಿನಿಮಾಗಳ ಬಗ್ಗೆ ಹೇಳೋದಾದ್ರೆ, ಅಸುರನ್ ಮತ್ತು ಕರ್ಣನ್ ಸಿನಿಮಾಗಳ ಸೂಪರ್ ಸಕ್ಸಸ್ ನಿಂದ ಧನುಷ್ ಖದರೇ ಬದಲಾಗಿಬಿಟ್ಟಿದೆ. ಇತ್ತೀಚೆಗೆ ಓಟಿಟಿಯಲ್ಲಿ ರಿಲೀಸ್ ಆದ ‘ಜಗಮೇ ತಂತಿರಂ’ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ ಒಳ್ಳೆ ಬೆಲೆಗೆ ಚಿತ್ರವನ್ನು ಡಿಜಿಟಲ್ ಫ್ಲ್ಯಾಟ್ ಫಾರ್ಮ್ ಗೆ ಮಾರಿ ಕೈತೊಳೆದುಕೊಂಡಿದ್ದರು.
‘ದಿ ಗ್ರೇಮ್ಯಾನ್’ ಅನ್ನೋ ಹಾಲಿವುಡ್ ಪ್ರಾಜೆಕ್ಟ್ ನಲ್ಲೂ ಧನುಷ್ ಬಣ್ಣ ಹಚ್ಚಿದ್ದಾರೆ. ತೆಲುಗಿನ ಶೇಖರ್ ಕಮ್ಮುಲ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಾಲಿವುಡ್ ನ ‘ಅತರಂಗಿ ರೇ’ ಸಿನಿಮಾ ರಿಲೀಸ್ ಗೆ ರೆಡಿಯಿದೆ. ಒಟ್ನಲ್ಲಿ ಸೌತ್ ಸಿನಿದುನಿಯಾದಲ್ಲಿ ರಜಿನಿ ಅಳಿಯನ ದರ್ಬಾರ್ ಜೋರಾಗಿದೆ.