ಓವನ್ ಅಲ್ಲಿ ಪಿಜ್ಜಾ ತಯಾರಿ ಮಾಡೋದು ಗೊತ್ತೇಯಿದೆ. ಆದ್ರೆ ಜ್ವಾಲಾಮುಖಿಯ ಲಾವಾರಸದಲ್ಲಿ ಪಿಜ್ಜಾ ಮಾಡೋಕೆ ಸಾಧ್ಯಾನಾ? ಅಯ್ಯೋ ಜ್ವಾಲಾಮುಖಿ ಹೆಸರು ಕೇಳಿದ್ರೆನೇ ಮೈ ಜುಮ್ ಅನ್ಸುತ್ತೆ. ಅದರ ಹತ್ತಿರಕ್ಕೆ ಯಾರಾದ್ರು ಹೋಗೋಕೆ ಆಗುತ್ತಾ ? ಅಂಥಾದ್ರಲ್ಲಿ ಪಿಜ್ಜಾ ಮಾಡೋದು ಅಂದ್ರೆ ತಮಾಷೆನಾ ? ಅಂತ ಕೇಳ್ತೀರಾ. ಆದರೆ ಇಲ್ಲೊಬ್ಬ ಅಸಾಮಿ ಅದನ್ನ ಸಾಧಿಸಿ ತೋರಿಸಿದ್ದಾನೆ. ಈತ ಅಗ್ನಿಪವರ್ತದಿಂದ ಹೊರಬರುವ ಲಾವಾರಸದಲ್ಲೇ ಪಾತ್ರೆ ಇಟ್ಟು ಬಿಸಿಬಿಸಿಯಾದ ರುಚಿರುಚಿಯಾದ ಪಿಜ್ಜಾ ಮಾಡ್ತಿದ್ದಾನೆ. ಆ ಪಿಜ್ಜಾಗೆ ಈಗ ಭಾರೀ ಡಿಮ್ಯಾಂಡು.
ಸೆಂಟ್ರಲ್ ಅಮೇರಿಕಾದ ಪಕಾಯ ಅಗ್ನಿಪರ್ವತದಿಂದ ಹರಿದು ಬರುವ ಲಾವಾರಸದ ಬಿಸಿ ಬೂದಿಯಲ್ಲಿ ಡೇವಿಡ್ ಗಾರ್ಸಿಯಾ ಅನ್ನೋ ವ್ಯಕ್ತಿ ಪಿಜ್ಜಾ ಮಾಡ್ತಿದ್ದಾನೆ. ವೃತ್ತಿಯಲ್ಲಿ ಅಕೌಂಟೆಂಟ್ ಆಗಿರೋ ಡೇವಿಡ್ ಪಿಜ್ಜಾ ತಯಾರಿಸಲು 1800F (ಅಂದಾಜು 1000 C) ಉಷ್ಣತೆ ತಡೆದುಕೊಳ್ಳುವ ಪ್ರತ್ಯೇಕವಾದ ಲೋಹದ ತಟ್ಟೆಗಳನ್ನ ಬಳಸಿ, ಪಿಜ್ಜಾ ತಯಾರಿಸುತ್ತಿದ್ದಾನೆ. ಇನ್ನು ಲಾವಾರಸ ಹರಿದು ಬರುವಾಗ ಅಲ್ಲಿಗೆ ಹೋಗಲು ಬೇಕಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳುತ್ತಾನೆ. ಈ ಪಿಜ್ಜಾ ಸವಿಯಲು ಸಾಕಷ್ಟು ಜನ ಟೂರಿಸ್ಟ್ ಅಲ್ಲಿಗೆ ಬರ್ತಿರೆ.
9 ವರ್ಷಗಳಿಂದ ಡೇವಿಡ್ ಗಾರ್ಸಿಯಾ ಈ ರೀತಿ ಪಿಜ್ಜಾ ತಯಾರಿಸುತ್ತಿದ್ದಾನೆ. ಫಾಸ್ಟ್ ಫುಡ್ ರೀತಿ ಕೆಲವೇ ನಿಮಿಷಗಳಲ್ಲಿ ಬಿಸಿಬಿಸಿಯಾದ ಪಿಜ್ಜಾ ಸಿದ್ಧಪಡಿಸಿ ಮಾರಾಟ ಮಾಡುತ್ತಾನೆ. ಗ್ವಾಟ್ಮಾಲಾದಲ್ಲಿ ಇರುವ 3 ಅಗ್ನಿಪರ್ತಗಳಲ್ಲಿ ಪಕಾಯ ಒಂದು. ಈ ಅಗ್ನಿಪರ್ವತ ಬಹಳಷ್ಟು ಸಲ ಸ್ಫೋಟಿಸಿದೆ. ಇದೀಗ ಮತ್ತೆ ಸ್ಫೋಟಗೊಂಡಿದ್ದು ಡೇವಿಡ್ ಗಾರ್ಸಿಯಾ ಪಿಜ್ಜಾ ಅಂಗಡಿ ಓಪನ್ ಮಾಡಿದ್ದಾನೆ. ಆತ ಅಗ್ನಿಪರ್ವತದ ಪಕ್ಕ ಪಿಜ್ಜಾ ಮಾಡುವ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.