ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳ ಪಾಲಿನ ಆರಾಧ್ಯದೈವ. 50 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರೋ ದಚ್ಚುಗೆ ದೇಶವಿದೇಶದಲ್ಲಿ ಅಭಿಮಾನಿಗಳಿದ್ದಾರೆ. ಬರೀ ಸಿನಿಮಾ ಮಾತ್ರವಲ್ಲ ತಮ್ಮ ಸಾಮಾಜಿಕ ಸೇವೆಯಿಂದಲೂ ದರ್ಶನ್ ಜನರಿಗೆ ಹತ್ತಿರವಾಗಿದ್ದಾರೆ. ಸಿನಿಮಾ ಬಿಟ್ರೆ ದಚ್ಚುಗೆ ಪ್ರಾಣಿ- ಪಕ್ಷಿ, ಪರಿಸರ ಕಾಳಜಿ ಜಾಸ್ತಿ. ಅವ್ರ ಈ ಪರಿಸರ ಪ್ರೇಮ ಕಂಡು ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ರಾಯಭಾರಿ ಆಗಿ ನೇಮಿಸಿದೆ. ಇತ್ತೀಚೆಗೆ ಕೃಷಿ ಇಲಾಖೆ ರಾಯಭಾರಿ ಆಗಿಯೂ ದರ್ಶನ್ ನೇಮಕಗೊಂಡಿದ್ದಾರೆ. ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿ, ಪಕ್ಷಿಗಳನ್ನ ಸಾಕಿ ಕೊಂಡಿದ್ದಾರೆ. ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದಾರೆ.
ಇತ್ತೀಚೆಗೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ದರ್ಶನ್ ಭೇಟಿ ನೀಡಿದ್ದರು. ಪಕ್ಷಿಗಳಲ್ಲೇ ದೇವರನ್ನು ಕಾಣುವ ಗುರುಗಳು ಸಚ್ಚಿದಾನಂದರು. ಆಶ್ರಮದ ಶುಕವನಕ್ಕೆ ತೆರಳಿದ್ದ ದರ್ಶನ್ ಅಲ್ಲಿದ್ದ ಪಕ್ಷಿಗಳನ್ನ ನೋಡಿ ಬೆರಗಾಗಿದ್ದರು. ಗುರುಗಳಿಂದ ಪಕ್ಷಿಗಳ ಬಗ್ಗೆ ಸಾಕಷ್ಟು ಕೇಳಿ ತಿಳಿದುಕೊಂಡಿದ್ದರು. ಸಚ್ಚಿದಾನಂದ ಗುರುಗಳು ದರ್ಶನ್ ಅವರಿಗೆ ರೆಡ್ ಹೆಡ್ಡೆಡ್ ಗಿಳಿಯೊಂದನ್ನ ಉಡುಗೊರೆಯಾಗಿ ನೀಡಿದ್ದರು. ಆ ಗಿಳಿ ಈಗ ತೂಗುದೀಪ ಫಾರ್ಮ್ ಹೌಸ್ ಸೇರಿದೆ.
ಇತ್ತೀಚೆಗೆ ಗಣಪತಿ ಸಚ್ಚಿದಾನಂದ ಸ್ವಾಮಿಜಿಗಳ 79ನೇ ವರ್ಷದ ಹುಟ್ಟುಹಬ್ಬ. ಗುರೂಜಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ದರ್ಶನ್ ಒಂದು ವೀಡಿಯೋ ಸಂದೇಶ ನೀಡಿದ್ದಾರೆ. ಅದರಲ್ಲಿ ಸಚ್ಚಿದಾನಂದರ ಪಕ್ಷಿ ಪ್ರೇಮ, ಪಕ್ಷಿಗಳ ಬಗೆಗಿನ ಜ್ಞಾನ ಎಂಥದ್ದು ಅಂತ ದರ್ಶನ್ ಹೇಳಿದ್ದಾರೆ. ಆಶ್ರಮಕ್ಕೆ ಹೋಗುವವರೆಗೂ ಗಿಳಿಗಳಲ್ಲಿ ಅಷ್ಟು ಪ್ರಭೇದಗಳಿವೆ ಅನ್ನೋದು ದರ್ಶನ್ ಅವರಿಗೂ ಗೊತ್ತಿರಲಿಲ್ಲವಂತೆ. ನಾನು ಪಕ್ಷಿಗಳ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡಿದ್ದೀನಿ. ಆದರೆ ಸಚ್ಚಿದಾನಂದ ಗುರುಗಳು ನನಗಿಂತ ಹೆಚ್ಚು ತಿಳಿದುಕೊಂಡಿದ್ದಾರೆ. ಅವರು ಪಕ್ಷಿಗಳಲ್ಲೇ ದೇವರನ್ನ ಕಾಣ್ತಿದ್ದಾರೆ. ಅವರಿಗೆ ಭಗವಂತ ಮತ್ತಷ್ಟು ಆಯಸ್ಸು ಕೊಡಲಿ ಅಂತ ದರ್ಶನ್ ಶುಭ ಹಾರೈಸಿದ್ದಾರೆ.