ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಸಿನಿಮಾಗಿಂತ್ಲೂ ಪ್ರಾಣಿ, ಪಕ್ಷಿ ಅಂದ್ರೆ ಪ್ರಾಣ. ತಮ್ಮ ಫಾರ್ಮ್ಹೌಸ್ನಲ್ಲಿ ಸಾಕಷ್ಟು ಪ್ರಾಣಿ-ಪಕ್ಷಿ ಸಾಕಿಕೊಂಡಿರೋ ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಆಗಿಯೂ ಕೆಲಸ ಮಾಡ್ತಿದ್ದಾರೆ. ಮೈಸೂರು ಮೃಗಾಲಯದಲ್ಲಿ ಒಂದಷ್ಟು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರಿನ ಮೃಗಾಲಯಕ್ಕೆ ಭೇಟಿ ನೀಡಿದ್ದ ದರ್ಶನ್, ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಇದೇ ವೇಳೆ ಪ್ರಾಣಿ ಸಂಕುಲದ ರಕ್ಷಣೆಗೆ ಜೈಜೋಡಿಸುವಂತೆ ಕರೆ ನೀಡಿದ್ದಾರೆ.
ಲಾಕ್ಡೌನ್ ನಿಂದಾಗಿ ಜನಸಾಮಾನ್ಯರು ಮಾತ್ರವಲ್ಲ ಮೃಗಾಲಯದಲ್ಲಿನ ಪ್ರಾಣಿಗಳು ಕೂಡ ತೊಂದರೆಗೆ ಒಳಗಾಗಿವೆ. ಪ್ರವಾಸಿಗರಿಲ್ಲದೇ, ಮೃಗಾಲಯದಲ್ಲಿನ ವನ್ಯ ಜೀವಿಗಳು ಸಂಕಷ್ಟ ಎದುರಿಸುವಂತಾಗಿದೆ. ವರಮಾನ ಇಲ್ಲದೇ ಮೃಗಾಯಲದ ನಿರ್ವಹಣೆ ಕಷ್ಟವಾಗಿದೆ. ಕರ್ನಾಟಕದಲ್ಲಿ 9 ಮೃಗಾಲಯಗಳಿದ್ದು, ಹೆಚ್ಚು ಕಡಿಮೆ 5 ಸಾವಿರ ಪ್ರಾಣಿ ಪಕ್ಷಿಗಳಿವೆ. ಒಂದು ಪಕ್ಷಿಯನ್ನು ಒಂದು ವರ್ಷದ ಮಟ್ಟಿಗೆ ದತ್ತು ತೆಗೆದುಕೊಳ್ಳಲು 1 ಸಾವಿರ ವ್ಯಯಿಸಬೇಕು. ಒಂದು ಹುಲಿಗೆ 1 ಲಕ್ಷ, ಒಂದು ಆನೆ 1.75 ಲಕ್ಷ ಕೊಡಬೇಕಾಗುತ್ತದೆ. Zoo of Karnataka ಆ್ಯಪ್ನಲ್ಲಿ ಮಾಹಿತಿ ಪಡೆದು ಪ್ರಾಣಿ, ಪಕ್ಷಿಗಳನ್ನ ದತ್ತು ಪಡೆಯಬಹುದು ಅಂತ ದರ್ಶನ್ ಹೇಳಿದ್ದಾರೆ.
ದರ್ಶನ್ ಅವರ ಪ್ರಾಣಿ-ಪಕ್ಷಿ, ಪರಿಸರ ಕಾಳಜಿ ನೋಡಿ ಅರಣ್ಯ ಇಲಾಖೆ ಅವ್ರನ್ನ ರಾಯಭಾರಿ ಆಗಿ ನೇಮಿಸಿದೆ. ತಾವು ಪ್ರಾಣಿಗಳನ್ನ ದತ್ತು ಪಡೆದುಕೊಂಡಿರೋದು ಮಾತ್ರವಲ್ಲದೇ ತಮ್ಮ ಆಪ್ತರಿಗೂ ಪ್ರಾಣಿ ದತ್ತು ಪಡೆಯುವಂತೆ ಪ್ರೇರೇಪಿಸಿದ್ದಾರೆ. ಸೃಜನ್ ಲೋಕೇಶ್, ಚಿಕ್ಕಣ್ಣ ಸೇರಿದಂತೆ ಹಲವು ಕಲಾವಿದರು ಪ್ರಾಣಿಗಳನ್ನ ದತ್ತು ಪಡೆದುಕೊಂಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಎಲ್ಲರೂ ಪ್ರಾಣಿಗಳನ್ನ ದತ್ತು ತೆಗೆದುಕೊಂಡು, ಜೀವ ಸಂಕುಲವನ್ನು ಉಳಿಸಿ, ಮೃಗಾಲಯಗಳನ್ನ ಬೆಳೆಸಬೇಕು ಅಂತ ದರ್ಶನ್ ಕರೆ ಕೊಟ್ಟಿದ್ದಾರೆ.