ವಿಶ್ವ ಪರಿಸರ ದಿನಾಚರಣೆ ದಿನವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದರು. ಲಾಕ್ಡೌನ್ ಕಾರಣ ಮೃಗಾಲಯಗಳ ಬಾಗಿಲು ಮುಚ್ಚಿ, ಆದಾಯ ಇಲ್ಲದೇ ನಿರ್ವಹಣೆ ಕಷ್ಟವಾಗಿದೆ. ಪ್ರಾಣಿ ಪಕ್ಷಿಗಳಿಗೆ ಸರಿಯಾಗಿ ಆಹಾರ ಸಿಗದೇ ಪರದಾಡುವಂತಾಗಿದೆ. ಎಲ್ಲರೂ ಸಾಧ್ಯವಾದಷ್ಟು ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯಿರಿ, ಜೀವ ಸಂಕುಲ ಉಳಿಸಿ, ಮೃಗಾಲಯ ಬೆಳೆಸಿ ಅಂತ ಕೇಳಿಕೊಂಡಿದ್ದರು. ದರ್ಶನ್ ಮನವಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಈಗಾಗಲೇ ಅಭಿಮಾನಿಗಳು ಸಾಕಷ್ಟು ಪ್ರಾಣಿ- ಪಕ್ಷಿಗಳನ್ನು ದತ್ತುಪಡೆದುಕೊಳ್ಳಲು ಪ್ರಾರಂಭಿಸಿದ್ದಾರೆ.
ಕೊರೋನಾ ಲಾಕ್ಡೌನ್ ನಿಂದ ಬರೀ ಜನಸಾಮಾನ್ಯರು ಮಾತ್ರವಲ್ಲ ಮೃಗಾಲಯದಲ್ಲಿರುವ ಪ್ರಾಣಿ- ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿವೆ. ಅದೇ ಕಾರಣಕ್ಕೆ ದತ್ತು ಪಡೆಯುವಂತೆ ನಟ ದರ್ಶನ್, ವಿನಂತಿಸಿಕೊಂಡಿದ್ದರು. ದರ್ಶನ್ ಅವರ ಮಾತಿಗೆ ಕೆಲವೇ ಗಂಟೆಗಳಲ್ಲಿ ಪ್ರತಿಫಲ ಸಿಕ್ಕಿದೆ. ಸದಾ ತಮ್ಮ ನೆಚ್ಚಿನ ನಟನ ಹಾದಿಯಲ್ಲೇ ನಡೆಯುವ ಅಭಿಮಾನಿಗಳು ಅಣ್ಣನ ಕರೆಗೆ ಓಗೊಟ್ಟಿದ್ದಾರೆ.
ಗದಗದ ಮೃಗಾಲಯ, ಮೈಸೂರು ಮೃಗಾಲಯ, ಬನ್ನೇರುಘಟ್ಟದ ಮೃಗಾಲಯದಲ್ಲಿರುವ ಪ್ರಾಣಿ- ಪಕ್ಷಿಗಳನ್ನು ದತ್ತು ಪಡೆದಿದ್ದಾರೆ.
ವಿವಿಧ ಬಗೆಯ ಪಕ್ಷಿಗಳು, ಕೋತಿ, ಹಾವು ಹೀಗೆ ಹಲವು ತಮ್ಮ ಕೈಲಾದಷ್ಟು ಹಣ ವ್ಯಯಿಸಿ, ಒಂದು ವರ್ಷದ ಮಟ್ಟಿಗೆ ದತ್ತು ಪಡೆದುಕೊಂಡಿದ್ದಾರೆ.
ಇಂತಹ ಮತ್ತಷ್ಟು ಕೈಗಳು ಮುಂದೆ ಬರಬೇಕಿದೆ. ಮೃಗಾಲಯದಲ್ಲಿರುವ ಪ್ರಾಣಿ- ಪಕ್ಷಿಗಳನ್ನ ಸಾಕುವ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ. ಜೀವ ಸಂಕುಲವನ್ನು ಉಳಿಸಿ, ಮೃಗಾಲಯಗಳನ್ನ ಬೆಳೆಸಬೇಕಿದೆ. ಈ ಮಧ್ಯೆ ಅಭಿಮಾನಿಗಳು ಪ್ರಾಣಿ- ಪಕ್ಷಿ ದತ್ತು ತೆಗೆದುಕೊಳ್ಳುತ್ತಿರುವುದಕ್ಕೆ ದರ್ಶನ್ ಧನ್ಯವಾದ ತಿಳಿಸಿದ್ದಾರೆ.