ದರ್ಶನ್ ಅಭಿನಯದ ರಾಬರ್ಟ್ ಬಾಕ್ಸಾಫೀಸ್ನಲ್ಲಿ ಭರ್ಜರಿ ಭೇಟೆಯಾಡುತ್ತಿದೆ. ಇನ್ನೇನು ₹100 ಕೋಟಿ ಸನಿಹದಲ್ಲಿರೋ ಸಿನಿಮಾದ ವಿಜಯ ಯಾತ್ರೆ ಮಾಡಲು ದರ್ಶನ್ ಮುಂದಾಗಿದ್ದರು. ಆದ್ರೆ, ಕಳೆದ ಕೆಲವು ದಿನಗಳಿಂದ ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಭೆ ಸಮಾರಂಭಗಳಿಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ರಾಬರ್ಟ್ ವಿಜಯ ಯಾತ್ರೆ ನಡೆಯುತ್ತೋ ಇಲ್ವೋ ಅನ್ನೋ ಅನುಮಾನ ವ್ಯಕ್ತವಾಗಿತ್ತು. ಅದೆಲ್ಲದಕ್ಕೂ ಚಾಲೆಂಜಿಂಗ್ ಸ್ಟಾರ್ ಈಗ ತೆರೆ ಎಳೆದಿದ್ದಾರೆ.
ನಿರೀಕ್ಷೆಯಂತೆ ದರ್ಶನ್ ವಿಜಯ ಯಾತ್ರೆಯನ್ನ ರದ್ದುಗೊಳಿಸಿದ್ದಾರೆ. ಅಂದ್ಕೊಂಡಂತೆ ಆಗಿದ್ದರೆ, ಸೋಮವಾರದಿಂದ ರಾಬರ್ಟ್ ಚಿತ್ರತಂಡ ವಿಜಯ ಯಾತ್ರೆ ಹೊರಡಬೇಕಿತ್ತು. ಆದ್ರೀಗ ಚಿತ್ರತಂಡದ ಜೊತೆ ಕೂತು ಚರ್ಚೆ ನಡೆಸಿದ ಬಳಿಕ ವಿಜಯ ಯಾತ್ರೆ ಮಾಡದೇ ಇರಲು ಡಿ ಬಾಸ್ ನಿರ್ಧರಿಸಿದ್ದಾರೆ. ಟ್ವೀಟ್ ಮೂಲಕ ತಮ್ಮ ಅಭಿಮಾನಿಗಳಿಗೆ ಈ ಸಂದೇಶವನ್ನ ರವಾನೆ ಮಾಡಿದ್ದಾರೆ.
ಎಲ್ಲರಿಗೂ ನಮಸ್ಕಾರ. ನೀವು ನಮ್ಮ ಚಿತ್ರಕ್ಕೆ ಅಪಾರ ಬೆಂಬಲವನ್ನು ನೀಡಿ ದೊಡ್ಡ ಮಟ್ಟದ ಯಶಸ್ಸಿಗೆ ಕಾರಣರಾಗಿದ್ದೀರಿ. ಅದಕ್ಕೆಂದೇ ವಿಜಯಯಾತ್ರೆ ಮೂಲಕ ನಿಮ್ಮ ಊರಿಗೆ ಬಂದು ಧನ್ಯವಾದಗಳು ಸಲ್ಲಿಸಬೇಕೆಂದು ವೇಳಾಪಟ್ಟಿ ರೆಡಿ ಮಾಡಿಕೊಂಡಿದ್ದೆವು. ಈ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ, ಎಲ್ಲೆಡೆ ಹೋಗಲು ಅನುಮತಿ ಸಿಗುವುದು ಕಷ್ಟವಾಗಿದೆ. ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
ದರ್ಶನ್ ಅಭಿಮಾನಿಗಳು ಕೂಡ ಡಿ ಬಾಸ್ ತೆಗೆದುಕೊಂಡ ಈ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ. ಕೊರೊನಾ 2ನೇ ಅಲೆ ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ತೊಂದರೆಯಾಗದೇ ಇರಲಿ ಅಂತ ವಿಜಯ ಯಾತ್ರೆಯನ್ನ ರದ್ದುಗೊಳಿಸಿದ್ದಾರೆಂದು ದಾಸನ ಫ್ಯಾನ್ಸ್ ಕೂಡ ಪ್ರಚಾರ ಮಾಡುತ್ತಿದ್ದಾರೆ.