ಕೊರೊನಾ ಸಂಕಷ್ಟದ ಸಮಯದಲ್ಲಿ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ. ಯಶ್, ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜ್ಕುಮಾರ್, ರಾಗಿಣಿ, ಸಂಜನಾ ಗರ್ಲಾನಿ ಸೇರಿದಂತೆ ಹಲವರು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿ ಸಹಾಯ ಮಾಡುತ್ತ ಬರ್ತಿದ್ದಾರೆ. ಲಾಕ್ಡೌನ್ನಿಂದ ಸಾಕಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದ್ಕಡೆ ಕೊರೊನಾದಿಂದ ಸಾಯುವ ಭಯ, ಮತ್ತೊಂದು ಕಡೆ ಹಸಿವು. ಇಂತಹ ಸಮಯದಲ್ಲಿ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಬೇಕು. ಸೆಲೆಬ್ರಿಟಿಗಳು ಆ ದಿಸೆಯಲ್ಲಿ ಕೈಲಾದ ಸಹಾಯ ಮಾಡುತ್ತಲೇ ಇದ್ದಾರೆ.
ನಟ ಪುನೀತ್ ರಾಜ್ಕುಮಾರ್ ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಸಿಎಂ ಪರಿಹಾರ ನಿಧಿಗೆ ₹50ಲಕ್ಷ ದೇಣಿಗೆ ನೀಡಿದ್ದರು. ಸಾಕಷ್ಟು ಜನ ಕಲಾವಿದರು ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದರು. ದರ್ಶನ್, ಸುದೀಪ್ ಅವರ ಅಭಿಮಾನಿಗಳು ಫುಡ್ ಕಿಟ್ ವಿತರಣೆ, ಊಟ ಹಂಚುವುದು ಸೇರಿದಂತೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡುತ್ತಲೇ ಇದ್ದಾರೆ. ಇನ್ನು ರಾಗಿಣಿ ದ್ವಿವೇದಿ , ಸಂಜನಾ ಗರ್ಲಾನಿ ಖುದ್ದಾಗಿ ಬೀದಿಗಿಳಿದು ಹಸಿದವರ ಹೊಟ್ಟೆಗೆ ಅನ್ನ ನೀಡುವ ಸಹಾಯ ಮಾಡುತ್ತಿದ್ದಾರೆ. ಕೊರೋನಾ 2ನೇ ಅಲೆಯಿಂದ ಮತ್ತೆ ಜನ ಸಂಕಷ್ಟಕ್ಕೆ ಸಿಲುಕಿದ್ದು, ಹಲವು ಕಡೆಗಳಿಂದ ನೆರವು ಹರಿದು ಬರ್ತಿದೆ.
ಒಂದೂವರೆ ಕೋಟಿ ತಂದ ದರ್ಶನ್
ವಿಶ್ವ ಪರಿಸರ ದಿನಾಚರಣೆ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ ಮನವಿಯಿಂದ ರಾಜ್ಯದ ಮೃಗಾಲಯಗಳಿಗೆ ₹1.50 ಕೋಟಿಗೂ ಅಧಿಕ ಹಣ ದೇಣಿಗೆಯಾಗಿ ಬಂದಿದೆ. ಲಾಕ್ಡೌನ್ ಸಮಯದಲ್ಲಿ ಜನರಷ್ಟೇ ಅಲ್ಲ ಮೃಗಾಲಯದಲ್ಲಿರುವ ಪ್ರಾಣಿ- ಪಕ್ಷಿಗಳು ಸಂಕಷ್ಟ ಎದುರಿಸುತ್ತಿವೆ. ಮೃಗಾಲಯ ಬಾಗಿಲು ಮುಚ್ಚಿ ಪ್ರವಾಸಿಗರಿಲ್ಲದೇ ವರಮಾನವಿಲ್ಲದೇ ರಾಜ್ಯದ 9 ಮೃಗಾಲಯಗಳು ಸಂಕಷ್ಟಕ್ಕೆ ಸಿಲುಕಿದ್ದವು. ಪ್ರಾಣಿ ಪ್ರೇಮಿಗಳು ಮೃಗಾಲಯದ ಜೀವಿಗಳನ್ನ ದತ್ತು ಪಡೆದು ಸಲಹಬೇಕು ಆ ಮೂಲಕ ಜೀವಸಂಕುಲ ರಕ್ಷಿಸಿ, ಮೃಗಾಲಯ ಬೆಳೆಸಿ ಅಂತ ದರ್ಶನ್ ಕೈಮುಗಿದು ಕೇಳಿಕೊಂಡಿದ್ದರು. ದರ್ಶನ್ ಅವರ ಒಂದು ಮಾತಿಗೆ ಕೋಟ್ಯಾಂತರ ರೂಪಾಯಿ ಹಣ ಮೃಗಾಲಯಗಳಿಗೆ ಹರಿದು ಬರ್ತಿದೆ. ಸಾಕಷ್ಟು ಜನ ದೇಣಿಗೆ ನೀಡಿ ಮೃಗಾಲಯದಲ್ಲಿರುವ ವಿವಿಧ ಬಗೆಯ ಪ್ರಾಣಿ ಪಕ್ಷಿಗಳನ್ನ ದತ್ತು ಪಡೀತ್ತಿದ್ದಾರೆ. 11 ದಿನಕ್ಕೆ ಒಂದೂವರೆ ಕೋಟಿಗೂ ಅಧಿಕ ಹಣ ಹರಿದು ಬಂದಿದೆ.
ಒಂದೂವರೆ ಕೋಟಿ ಕೊಟ್ಟ ಯಶ್
ಲಾಕ್ಡೌನ್ನಿಂದ ಚಿತ್ರರಂಗ ಸಹ ಸಾಕಷ್ಟು ನಷ್ಟ ಅನುಭವಿಸುತ್ತಿದೆ. ಥಿಯೇಟರ್ ಬಾಗಿಲು ಮುಚ್ಚಿ ತಿಂಗಳು ಕಳೆದಿದೆ. ಸಿನಿಮಾ ಚಟುವಟಿಕೆಗಳು ನಿಂತು ಸಿನಿಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ. ಇತ್ತೀಚಿಗೆ ನಟ ಯಶ್ ಕನ್ನಡ ಚಿತ್ರರಂಗದ 3 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ತಲಾ ₹5 ಸಾವಿರ ನೀಡಿದ್ದಾರೆ. ಈ ರೀತಿ ಕಲಾವಿದರ ಮತ್ತು ತಂತ್ರಜ್ಞರ ಖಾತೆಗಳಿಗೆ ಅಂದಾಜು ₹1.50 ಕೋಟಿಗೂ ಅಧಿ ಹಣ ಜಮೆ ಮಾಡಿದ್ದಾರೆ.