ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಭಾರೀ ಯಶಸ್ಸು ಗಳಿಸಿದೆ. ಮಾರ್ಚ್ 11 ಕ್ಕೆ ಬಿಡುಗಡೆಯಾದ ಈ ಚಿತ್ರ ಇಂದಿಗೂ ಹೌಸ್ ಫುಲ್ ಆಗಿ ಥಿಯೇಟರ್ ಗಳಲ್ಲಿ ಓಡುತ್ತಿದೆ. ರಾಬರ್ಟ್ ಬಿಡುಗಡೆಗೂ ಮೊದಲು ಹುಬ್ಬಳ್ಳಿಯಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮ ಮಾಡುವ ಮೂಲಕ ಹುಬ್ಬಳ್ಳಿ ಮಂದಿಯನ್ನು ಭೇಟಿಯಾಗಿದ್ದ ಸಿನಿಮಾತಂಡ ಇದೀಗ ಇಡೀ ರಾಜ್ಯದ ಜನರನ್ನು ಭೇಟಿಯಾಗಿ ಖುಷಿ ಹಂಚಿಕೊಳ್ಳುವುದಕ್ಕೆ ಸಿದ್ಧರಾಗಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ದರ್ಶನ್ ಮತ್ತು ಇಡೀ ರಾಬರ್ಟ್ ತಂಡ ಕರ್ನಾಟಕ ಪರ್ಯಟನೆ ಶುರು ಮಾಡಲಿದೆ. ಇದೇ ತಿಂಗಳು ಮಾರ್ಚ್ 29ರಿಂದ ಪ್ರಾರಂಭವಾಗಲಿರುವ ವಿಜಯ ಯಾತ್ರೆ ಏಪ್ರಿಲ್ 1ರ ವರೆಗೂ ನಡೆಯಲಿದೆ. ಮಾರ್ಚ್ 29 ವಿಜಯ ಯಾತ್ರೆಯ ಮೊದಲ ದಿನ ರಾಬರ್ಟ್ ತಂಡ ತುಮಕೂರಿಗೆ ಭೇಟಿ ನೀಡುತ್ತಿದೆ. ತುಮಕೂರಿನಿಂದ ಪ್ರಾರಂಭವಾಗುವ ಯಾತ್ರೆ ಬಳಿಕ ಚಿತ್ರದುರ್ಗ, ದಾವಣಗೆರೆ ತಲುಪಿ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ.
ಮಾರ್ಚ್ 30ಕ್ಕೆ ಧಾರವಾಡ, ಹುಬ್ಬಳ್ಳಿ ಮತ್ತು ಹಾವೇರಿ ಅಭಿಮಾನಿಗಳನ್ನು ರಾಬರ್ಟ್ ತಂಡ ಭೇಟಿಯಾಗುತ್ತಿದೆ. 31ಕ್ಕೆ ಶಿವಮೊಗ್ಗ, ಹಾಸನ ಮತ್ತು ತಿಪಟೂರು ಏಪ್ರಿಲ್ 1ಕ್ಕೆ ಗುಂಡ್ಲುಪೇಟೆ, ಮೈಸೂರು, ಮಂಡ್ಯ ಮತ್ತು ಮದ್ದೂರಿಗೆ ಭೇಟಿ ನೀಡಿ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಲಿದ್ದಾರೆ. ರಾಬರ್ಟ್ ಯಶಸ್ಸಿಗೆ ಕಾರಣ ಜನರು, ಹಾಗಾಗಿ ಅವರನ್ನು ನೇರವಾಗಿ ಭೇಟಿಯಾಗಿ ಧನ್ಯವಾದ ತಿಳಿಸೋದು ಒಳಿತು ಎನ್ನುವ ಲೆಕ್ಕಾಚಾರ ಚಿತ್ರತಂಡದ್ದು. ನಾಯಕ ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಇಡೀ ಚಿತ್ರತಂಡವನ್ನು ಭೇಟಿಯಾಗೋಕೆ ಸಜ್ಜಾಗಿದೆ.