ದ್ವಿಚಕ್ರ ವಾಹನ ಸವಾರಿ ಮಾಡುವಾಗ ಬೈಕ್ ಸವಾರ ಮತ್ತು ಹಿಂಬದಿ ಸವಾರರಿಬ್ಬರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಅಪಘಾತದ ವೇಳೆ ಹೆಲ್ಮೆಟ್ ಧರಿಸದೇ ಸಾಕಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದು, ಅದಕ್ಕೆ ನಟ ಸಂಚಾರಿ ವಿಜಯ್ ಪ್ರಕರಣ ಸ್ಪಷ್ಟ ನಿರ್ದಶನ. ವಾಹನ ಸವಾರರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಟ್ರಾಫಿಕ್ ಪೊಲೀಸರು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ತಿದ್ದಾರೆ. ಆಂಧ್ರ, ತೆಲಂಗಾಣ ಪೊಲೀಸರು ಕೂಡ ಈ ವಿಚಾರವಾಗಿ ನಾನಾ ರೀತಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ತಿದ್ದು, ಕ್ರಿಯೇಟಿವ್ ಆಗಿ ಸೋಷಿಯಲ್ ಮೀಡಿಯಾದಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ. ಅದಕ್ಕಾಗಿ ಇದೀಗ RRR ಚಿತ್ರದ ಹೊಸ ಪೋಸ್ಟರ್ ಅನ್ನು ಬಳಸಿಕೊಂಡಿದ್ದಾರೆ.
ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ RRR. ಜ್ಯೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ತೇಜಾ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಚರಣ್, ಕೋಮರಂ ಭೀಮ್ ಪಾತ್ರದಲ್ಲಿ ತಾರಕ್ ಅಬ್ಬರಿಸಿದ್ದಾರೆ. ಇದೀಗ ರಾಮ್- ಭೀಮ್ ಬೈಕ್ ಏರಿ ಬರುತ್ತಿರುವ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಆದರೆ ಪೋಸ್ಟರ್ ನಲ್ಲಿ ಇಬ್ಬರು ಹೆಲ್ಮೆಟ್ ಹಾಕಿಲ್ಲ. ಪೋಸ್ಟರ್ ನಲ್ಲಿ ಇಬ್ಬರ ತಲೆಗೂ ಹೆಲ್ಮೆಟ್ ಸೇರಿಸಿ ಎಡಿಟ್ ಮಾಡಿ, ‘ಈಗ ಪರ್ಫೆಕ್ಟ್ ಆಗಿದೆ, ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿರಿ’ ಅಂತ ಸೈಬರಾಬಾದ್ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ. ಪೊಲೀಸರ ಈ ಕ್ರಿಯೇಟಿವಿಗೆ ಸಿನಿರಸಿಕರು ಫಿದಾ ಆಗಿದ್ದು, RRR ಚಿತ್ರತಂಡ ಕೂಡ ಮೆಚ್ಚಿಕೊಂಡಿದೆ. ಅಷ್ಟೇ ಅಲ್ಲ, ‘ಇನ್ನು ಪರ್ಫೆಕ್ಟ್ ಆಗಿಲ್ಲ, ನಂಬರ್ ಪ್ಲೇಟ್ ಮಿಸ್ ಆಗಿದೆ’ ಅಂತ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
RRR 19 ನೇ ಶತಮಾನದ ಆರಂಭದಲ್ಲಿ ನಡೆಯುವ ಫಿಕ್ಷನಲ್ ಕಥೆ. 2 ಸಾಂಗ್ ಹೊರತುಪಡಿಸಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, 2 ಭಾಷೆಗಳಲ್ಲಿ ತಾರಕ್, ಚರಣ್ ಡಬ್ ಕೂಡ ಮಾಡಿ ಮುಗಿಸಿದ್ದಾರಂತೆ. ಅಕ್ಟೋಬರ್ 13ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಪೋಸ್ಟರ್ ನಲ್ಲಿ ತಿಳಿಸಿದೆ.