ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಆಗುತ್ತೆ ಅನ್ನೋ ವದಂತಿ ಎದ್ದಿರೋ ಬೆನ್ನಲ್ಲೇ ಲಿಂಗಾಯತ ಸಮುದಾಯ ಅಸಮಧಾನ ಹೊರಹಾಕಿದೆ. ಪರೋಕ್ಷವಾಗಿ ರಾಜ್ಯದ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದ್ರೆ ಪರಿಸ್ಥಿತಿ ಸರಿ ಇರೋದಿಲ್ಲ ಅನ್ನೋ ಸುಳಿವು ನೀಡಿದೆ. ಇನ್ನೊಂದೆಡೆ ಕಾಂಗ್ರೆಸ್ನ ಲಿಂಗಾಯತ ಮುಖಂಡರು ಕೂಡ ಯಡಿಯೂರಪ್ಪಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಬಿಜೆಪಿ ಹೈ ಕಮಾಂಡ್ಗೆ ನಾಯಕತ್ವ ಬದಲಾವಣೆ ಮಾಡೋದು ದೊಡ್ಡ ತಲೆನೋವಾಗುವ ಸಾಧ್ಯತೆಯಿದೆ.
ನಳೀನ್ ಕುಮಾರ್ ಕಟೀಲ್ರದ್ದೇ ಧ್ವನಿ ಎನ್ನಲಾದ ಆಡಿಯೋ ಹೊರಬೀಳುತ್ತಿದ್ದಂತೆ ಲಿಂಗಾಯತ ಮುಖಂಡರು ಸ್ವತ: ಯಡಿಯೂರಪ್ಪರನ್ನು ಭೇಟಿ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ್ ಬಹಿರಂಗವಾಗಿಯೇ ಬೆಂಬಲ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಬದಲಾವಣೆ ಮಾಡದೆ ಇರುವಂತೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ.
ಇದರ ಹೊರತಾಗಿಯೂ ಯಡಿಯೂರಪ್ಪರನ್ನು ಬದಲಾವಣೆ ಮಾಡಿದ್ರೆ, ಲಿಂಗಾಯತ ಸಮುದಾಯದ ವಿರೋಧ ಎದುರಿಸಬೇಕಾಗುತ್ತೆ ಅನ್ನೋ ಎಚ್ಚರಿಕೆಯನ್ನು ಮುಖಂಡರು ನೀಡಿದ್ದಾರೆ. ಅಲ್ಲದೆ ಸ್ವಾಮೀಜಿಗಳು ಮತ್ತು ಸಮುದಾಯದ ಮುಖಂಡರು ಈಗಾಗ್ಲೇ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೂಡ ನಿಜಲಿಂಗಪ್ಪ, ಬೊಮ್ಮಾಯಿ, ವೀರೇಂದ್ರ ಪಾಟೀಲ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ, ಲಿಂಗಾಯತ ಸಮುದಾಯ ಹೀಗೆ ಬೆನ್ನಿಗೆ ನಿಂತಿತ್ತು. ಕಾಂಗ್ರೆಸ್ ಹಾಗೂ ಜನತಾದಳದ ವಿರುದ್ಧ ಸಿಟ್ಟಿಗೆದ್ದು ರಾಜಕೀಯ ತಿರುಗೇಟು ನೀಡಿದ್ದರು. ಈಗ ಯಡಿಯೂರಪ್ಪರನ್ನು ಬದಲಾವಣೆ ಮಾಡಿದ್ರೆ ಇಂತಹದ್ದೇ ಪರಿಸ್ಥಿತಿ ಎದುರಾಗಲಿದೆ ಅನ್ನೋ ಸಂದೇಶ ರವಾನೆ ಮಾಡುವ ಸಾಧ್ಯತೆಯಿದೆ.