ಕರ್ನಾಟಕ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಹಾನಗಲ್ ಕ್ಷೇತ್ರವು ಸಿ.ಎಂ ಉದಾಸಿ ಅವರ ನಿಧನದಿಂದ ಹಾಗೂ ಸಿಂದಗಿ ಕ್ಷೇತ್ರ ಎಂ.ಸಿ ಮನಗೂಳಿ ನಿಧನದಿಂದ ತೆರವಾಗಿತ್ತು. ಈ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆಯಲಿದೆ. ನವೆಂಬರ್ 2ರಂದು ಕರ್ನಾಟಕ ಉಪಚುನಾವಣೆ ಫಲಿತಾಂಶ ಹೊರಬೀಳಲಿದೆ. ಆದ್ರೆ ಈ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಡಿಕೆ ಶಿವಕುಮಾರ್ ಹಾಗೂ ಎಚ್ಡಿ ಕುಮಾರಸ್ವಾಮಿ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹೋರಾಟ ಮಾಡ್ಬೇಕಾಗಿದೆ. ಅದ್ಯಾಕೆ ಅಂತ ಮುಂದೆ ಓದಿ.
ನೂತನ ಸಿಎಂ ಬೊಮ್ಮಾಯಿಗೆ ಹಾನಗಲ್ ಕ್ಷೇತ್ರ ಹೊಸ ಸವಾಲು
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ಮೇಲೆ ಬಸವರಾಜ ಬೊಮ್ಮಾಯಿ ಹಲವು ಸವಾಲುಗಳು ಎದುರಾಗಿವೆ. ಆದರೆ, ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಸಿಎಂ ಆದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಾಗಿದ್ದು, ಹಾನಗಲ್ ಕ್ಷೇತ್ರ ಗೆದ್ದು ತನ್ನ ಸಾಮರ್ಥ್ಯವೇನು ಅನ್ನೋದನ್ನು ಬಸವರಾಜ ಬೊಮ್ಮಾಯಿ ತೋರಿಸಬೇಕಿದೆ.
ಪಾಲಿಕೆ ಚುನಾವಣೆಯಲ್ಲಿ ಹಿನ್ನಡೆ, ಡಿಕೆಶಿಗೆ ಸವಾಲಿನ ಚುನಾವಣೆ
ಕೆಪಿಸಿಸಿ ಅಧ್ಯಕ್ಷರಾಗಿರೋ ಡಿ ಕೆ ಶಿವಕುಮಾರ್ಗೂ ಈ ಉಪಚುನಾವಣೆ ಪ್ರತಿಷ್ಠೆಯಾಗಿದೆ. ಈಗಾಗ್ಲೇ ಪಾಲಿಕೆ ಚುನಾವಣೆಯಲ್ಲಿ ಡಿಕೆಶಿಗೆ ಹಿನ್ನೆಡೆಯಾಗಿದೆ. ಹೀಗಾಗಿ ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರಗಳು ಡಿ ಕೆ ಶಿವಕುಮಾರ್ಗೆ ಸವಾಲಿನ ಚುನಾವಣೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ರಾಜಕೀಯ ಶಕ್ತಿ ಪ್ರದರ್ಶಿಸಬೇಕಿರೋ ಅನಿವಾರ್ಯತೆ ಡಿ.ಕೆ.ಶಿವಕುಮಾರ್ ಮುಂದಿದೆ. ಪಕ್ಷದೊಳಗಿನ ಅತೃಪ್ತಿಯನ್ನು ನಿವಾರಣೆ ಮಾಡಬೇಕು. ಕೆಲವು ಬದಲಾವಣೆಗಳನ್ನು ತರಬೇಕಿದೆ. ಅಲ್ಲದೆ ಅಲ್ಪಸಂಖ್ಯಾತರನ್ನು ಸೆಳೆದು ಗೆಲುವು ದಾಖಲಿಸೋ ಜವಾಬ್ದಾರಿ ಡಿಕೆಶಿ ಮೇಲಿದೆ.
ಡಿಕೆಶಿ ನಾಯಕತ್ವ ಕುಗ್ಗಿಸೋಕೆ ಕುಮಾರಸ್ವಾಮಿ ಹೋರಾಟ
ಹಾನಗಲ್ ಹಾಗೂ ಸಿಂಧಗಿ ಎರಡೂ ಕ್ಷೇತ್ರಗಳ ಉಪಚುನಾವಣೆ ಜೆಡಿಎಸ್ ಪಕ್ಷಕ್ಕೆ ಬಹುಮುಖ್ಯ. ಈಗಾಗ್ಲೇ ಕಳೆದುಕೊಂಡಿರೋ ಸಿಂದಗಿ ಕ್ಷೇತ್ರವನ್ನು ಮರುಪಡೆಯಬೇಕಿದೆ. ಕೇವಲ ಒಕ್ಕಲಿಗರಷ್ಟೇ ಜೆಡಿಎಸ್ನಲ್ಲಿ ಇಲ್ಲ. ಲಿಂಗಾಯತರು, ಅಲ್ಪಸಂಖ್ಯಾತರೂ ನಮ್ಮೊಂದಿಗಿದ್ದಾರೆ ಅನ್ನೋದನ್ನು ಈ ಚುನಾವಣೆ ಮೂಲಕ ಪ್ರದರ್ಶಸಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯ ರಾಜಕೀಯದಲ್ಲಿ ಡಿಕೆಶಿ ಪ್ರಾಬಲ್ಯವನ್ನು ಕುಗ್ಗಿಸಲು ಎಚ್ಡಿ ಕುಮಾರಸ್ವಾಮಿಗೆ ಈ ಉಪಚುನಾವಣೆ ಸವಾಲೆನಿಸಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳಿಗೆ ಉಪಚುನಾವಣೆ ಅತೀ ಮುಖ್ಯ. ಯಾಕಂದ್ರೆ, ಈ ಮಿನಿಸಮರ ಸಾರ್ವತ್ರಿಕ ಚುನಾವಣೆಗೂ ಮುನ್ನ ನಡೆಯುವ ಕ್ವಾರ್ಟರ್ ಫೈನಲ್ ಎಲೆಕ್ಷನ್ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಈ ಮೂರು ನಾಯಕರ ತಂತ್ರ-ಪ್ರತಿತಂತ್ರದ ಬಗ್ಗೆ ರಾಜ್ಯದ ಜನತೆ ಕುತೂಹಲದಿಂದ ನೋಡುತ್ತಿದೆ.