ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ದಾರೆ. 43 ಮಂದಿ ಕೇಂದ್ರದ ಸಂಪುಟ ಸೇರಿದ್ದಾರೆ. ಅದ್ರಲ್ಲೂ ಕರ್ನಾಟಕದ ಮೂವರು ಎಂಪಿ ಹಾಗೂ ಒಬ್ಬ ರಾಜ್ಯ ಸಭಾ ಸದಸ್ಯ ಕೂಡ ಸೇರಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ, ಬೀದರ್ ಸಂಸದ ಭಗವಂತ ಖೂಬ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವ್ರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ 4 ರಾಜ್ಯ ಸಚಿವ ಸ್ಥಾನ ನೀಡಿದ್ದರು ಹಿಂದಿನ ಲೆಕ್ಕಾಚಾರದ ಬಗ್ಗೆ ಈಗ ಭಾರಿ ಚರ್ಚೆಯಾಗುತ್ತಿದೆ. ಮೋದಿಯ ನಾಲ್ಕು ಲೆಕ್ಕಾಚಾರದ ಸಂಪೂರ್ಣ ಮಾಹಿತಿ ಇಲ್ಲಿದೆ.
ಶೋಭಾ ಕರಂದ್ಲಾಜೆ ರಾಜ್ಯ ಸ್ಥಾನ ಒಲಿದು ಬಂದಿದ್ದೇಕೆ?
ಶೋಭಾ ಕರಂದ್ಲಾಜೆ ಆಯ್ಕೆಯ ಹಿಂದೆ ಮೋದಿಯ ಲೆಕ್ಕಾಚಾರ ಸ್ಪಷ್ಟವಿದೆ. ಕೇಂದ್ರ ಸಚಿವ ಡಿ ವಿ ಸದಾನಂದಗೌಡ ರಾಜೀನಾಮೆ ಬಳಿಕ ಗೌಡ ಸಮುದಾಯದ ಮತ್ತೊಬ್ಬ ಮುಖಂಡರನ್ನು ಆ ಸ್ಥಾನದಲ್ಲಿ ಕೂರಿಸಬೇಕಿತ್ತು. ಜೊತೆಗೆ ಕರಾವಳಿ ಭಾಗದವರನ್ನೇ ಆಯ್ಕೆ ಮಾಡಿ ಮುಂದಿನ ಚುನಾವಣೆಗೆ ತಂತ್ರಗಾರಿಕೆ ರೂಪಿಸಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಶೋಭಾ ಕರಂದ್ಲಾಜೆ ಆರ್ಎಸ್ಎಸ್ ಹಿನ್ನೆಲೆಯುಳ್ಳರು. ಇಷ್ಟು ವರ್ಷ ಶೋಭಾ ಪಕ್ಷ ಹಾಗೂ ಸಂಘಕ್ಕಾಗಿ ದುಡಿದಿದ್ದರಿಂದ ಕೇಂದ್ರ ಗುರುತಿಸಿದೆ ಅನ್ನೋ ಸಂದೇಶ ರವಾನೆ ಮಾಡಿದೆ. ಅಲ್ಲದೆ, ಶೋಭಾ, ಯಡಿಯೂರಪ್ಪ ಬಣದಿಂದ ಎರಡು ವರ್ಷಗಳ ಕಾಲ ದೂರವಿದ್ದಿದ್ದರಿಂದ ರಾಜ್ಯ ಸಚಿವ ಸ್ಥಾನ ಒಲಿದಿದೆ ಎಂಬ ಮಾತು ಕೂಡ ಕೇಳಿಬರ್ತಿದೆ.
ಎ.ನಾರಾಯಣಸ್ವಾಮಿಯನ್ನು ಗುರುತಿಸಿದ್ದೇಗೆ?
ಮುಂದೆ ಬರಲಿರೋ ಚುನಾವಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಡಿರೋದು ಸ್ಪಷ್ಟವಾಗಿದೆ. ಎ.ನಾರಾಯಣಸ್ವಾಮಿ ಮೊದಲ ಬಾರಿಗೆ ಸಂಸದನಾಗಿ ಆಯ್ಕೆಯಾಗಿದ್ದರೂ, ಜಾತಿ ಆಧಾರದ ಮೇಲೆ ರಾಜ್ಯ ಸಚಿವ ಖಾತೆ ನೀಡಲಾಗಿದೆ. ಎ.ನಾರಾಯಣ ಸ್ವಾಮಿ ದಲಿತ ಎಡ ಪಂತದ ಮುಖಂಡ. ರಾಜ್ಯದಲ್ಲಿ ದಲಿತ ಎಡ ಪಂತದ ಮತಗಳಲ್ಲಿರೋ ಅಸಮಧಾನವನ್ನು ಸರಿದೂಗಿಸಲು ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿಯನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಬೀದರ್ ಸಂಸದ ಭಗವಂತ ಖೂಬ ಮೋದಿ ಕಣ್ಣಿಗೆ ಬಿದ್ದಿದ್ದೇಗೆ?
ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದ ನಾಯಕ ಭಗವಂತ ಖೂಬ. ಈ ಸಮುದಾಯದ ನಾಯಕರೊಬ್ಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕಿತ್ತು. ಅಲ್ಲದೆ ಕೇಂದ್ರದ ಜೊತೆ ಭಗವಂತ ಖೂತ ಸಂಬಂಧ ಉತ್ತಮವಾಗಿದೆ. ಕೇಂದ್ರ ರೂಪಿಸಿದ ಬಹುತೇಕ ಎಲ್ಲಾ ಅನುದಾನಗಳನ್ನು ಖೂಬ ತನ್ನ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಳ್ಳದ ಭಗವಂತ್ ಖೂಬ ಕೇಂದ್ರದ ನೇರ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಭಗವಂತ ಖೂಬ ರಾಜ್ಯ ಸಚಿವ ಸ್ಥಾನ ನೀಡುವ ಮೂಲಕ ತಾನೇ ಸುಪ್ರೀಂ ಅನ್ನೋ ಸಂದೇಶವನ್ನು ರಾಜ್ಯಕ್ಕೆ ರವಾನೆ ಮಾಡಲಾಗಿದೆ.
ಉದ್ಯಮಿ, ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆಯ್ಕೆ ಲೆಕ್ಕವೇನು?
ಉದ್ಯಮಿ ಹಾಗೂ ರಾಜ್ಯ ಸಭಾ ಸದಸ್ಯರೂ ಆಗಿರೋ ರಾಜೀವ್ ಚಂದ್ರಶೇಖರ್ರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಪಾಂಡಿಚೇರಿಯಲ್ಲಿ ಬಿಜೆಪಿ ಅಧಿಕಾರಿ ಹಿಡಿಯುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಸಂಘಟನಾ ಚಾತುರ್ಯ ಹೊಂದಿರೋ ರಾಜೀವ್ ರಾಜ್ಯ ಖಾತೆ ಸಚಿವ ಸ್ಥಾನ ನೀಡಲಾಗಿದೆ. ಬ್ರಾಹ್ಮಣ ಸಮುದಾಯವನ್ನೂ ಸಮಾಧಾನ ಪಡಿಸೋ ಕೆಲಸ ಮೋದಿ ಮಾಡಿದ್ದಾರೆ.