ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಚೈತ್ರಾ ಕೋಟೂರ್ ಸರಳವಾಗಿ ಉದ್ಯಮಿ ನಾಗಾರ್ಜುನ್ ರನ್ನು ಮದುವೆಯಾಗಿದ್ದಾರೆ. ಆದ್ರೆ ಮದುವೆಯಾದ ದಿನವೇ ಒಂದಷ್ಟು ರಗಳೆಯೂ ಆಗಿ ಪೋಲೀಸ್ ಸ್ಟೇಶನ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ಚೈತ್ರಾ ಮತ್ತು ನಾಗಾರ್ಜುನ್ ಸರಳವಾಗಿ ಮದುವೆಯಾಗಿದ್ದರು. ಮಂಡ್ಯ ಮೂಲದ ಕನ್ಸಟ್ರಕ್ಷನ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ನಾಗಾರ್ಜುನ್ ರನ್ನು ಮಾರ್ಚ್ 28ರ ಭಾನುವಾರ ಇಷ್ಟಪಟ್ಟು ಸರಳ ವಿವಾಹವಾಗಿದ್ದಾರೆ ಚೈತ್ರಾ.


ಕಳೆದ ವರ್ಷ ಬಿಗ್ ಬಾಸ್ ಮನೆಯಿಂದ ಚೈತ್ರಾ ಹೊರಬಂದ ನಂತರ ನಾಗಾರ್ಜುನ್ ಪರಿಚಯ ಆಗಿತ್ತಂತೆ. ಆ ಪರಿಚಯ ಸ್ನೇಹಕ್ಕೆ, ನಂತರ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ರು. ಚೈತ್ರಾಗೆ ಮೊದಲಿನಿಂದಲೂ ಅದ್ಧೂರಿ ಮದುವೆ ಇಷ್ಟವಿಲ್ಲವಂತೆ. ಹಾಗಾಗಿ ಸರಳವಾಗಿ ವಿವಾಹವಾಗಿತ್ತು ಈ ಜೋಡಿ. ಹಾರ ಬದಲಾಯಿಸಿಕೊಂಡ ದಂಪತಿಯ ಫೋಟೋ ನೋಡಿ ಅಭಿಮಾನಿಗಳೂ ಮನಸಾರೆ ಹಾರೈಸಿದ್ರು.
ಆದ್ರೆ ನಾಗಾರ್ಜುನ್ ಕುಟುಂಬಸ್ಥರಿಗೆ ಅವರು ಚೈತ್ರಾರನ್ನು ಮದುವೆಯಾಗೋದು ಸ್ವಲ್ಪವೂ ಇಷ್ಟವಿರಲಿಲ್ವಂತೆ. ಇದೇ ವಿಚಾರ ಈಗ ರಗಳೆಯಾಗಿದ್ದು ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿದೆ. ಕೋಲಾರದ ಕುರುಬರಪೇಟೆಯಲ್ಲಿರುವ ಚೈತ್ರಾರ ಮನೆಗೆ ಬಂದ ನಂತರ ನಾಗಾರ್ಜುನ್ ಈ ಬಗ್ಗೆ ತಗಾದೆ ತೆಗದಿದ್ದಾರೆ. ಕೋಲಾರ ಮಹಿಳಾ ಪೋಲೀಸ್ ಠಾಣೆಯಲ್ಲಿ ಇಬ್ಬರೂ ತಂತಮ್ಮ ಹೇಳಿಕೆ ನೀಡಿದ್ದಾರೆ. ಬುಧವಾರದವರಗೆ ಪೋಲೀಸರು ಇಬ್ಬರಿಗೂ ಸಮಯ ನೀಡಿದ್ದಾರೆ. ಅಷ್ಟರಲ್ಲಿ ಈ ಜೋಡಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದರ ಮೇಲೆ ಈ ಪ್ರಕರಣ ನಿರ್ಧಾರವಾಗಲಿದೆ. ಒಟ್ನಲ್ಲಿ ಮದುವೆಯಾದ ವಾರದೊಳಗೆ ಇಷ್ಟೆಲ್ಲಾ ರಗಳೆ ಎದ್ದಿದ್ದು ಅಭಿಮಾಣಿಗಳಿಗಂತೂ ಬಹಳ ಬೇಸರವಾಗಿದೆ.
ಚೈತ್ರಾ ಬಹುಮುಖ ಪ್ರತಿಭೆ. ರಂಗಭೂಮಿ, ಚಿತ್ರರಂಗ ಎರಡರಲ್ಲೂ ತಮ್ಮನ್ನು ತೊಡಗಿಸಿಕೊಂಡಾಕೆ. ಸೂಜಿದಾರ ಚಿತ್ರದಲ್ಲಿ ಆಕೆ ನಿರ್ವಹಿಸಿದ ಪಾತ್ರ ಗಮನ ಸೆಳೆದಿತ್ತು. ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ ಚೈತ್ರಾ. ಜಾಹೀರಾತು ನಿರ್ದೇಶನ ಮಾಡುವ ಅವರು ಸಿನಿಮಾ ನಿರ್ದೇಶನಕ್ಕೂ ತಯಾರಿ ನಡೆಸಿದ್ದಾರೆ. ಬಿಗ್ ಬಾಸ್ ಸೀಸನ್ 7 ಸ್ಪರ್ಧಿಯಾದ ನಂತರ ಚೈತ್ರಾ ಬಹಳ ಖ್ಯಾತಿ ಪಡೆದಿದ್ದರು.