ಖ್ಯಾತ ನಟ ಅರ್ಜುನ್ ಸರ್ಜಾ ಹನುಮಂತನ ಪರಮ ಭಕ್ತ. ಕೆಲ ವರ್ಷಗಳಿಂದ ಸರ್ಜಾ ಚೆನ್ನೈನ ತಮ್ಮ ಫಾರ್ಮ್ ಹೌಸ್ ನಲ್ಲಿ ಹನುಮಂತನ ದೊಡ್ಡ ದೇವಸ್ಥಾನ ನಿರ್ಮಿಸುತ್ತಾ ಬಂದಿದ್ದರು. ಕೊನೆಗೂ ಆಲಯ ನಿರ್ಮಾಣ ಪೂರ್ಣಗೊಂಡಿದ್ದು, ಜುಲೈ 1 ಮತ್ತು 2ರಂದು ಕುಂಭಾಭಿಷೇಕ ನಡೆಸಿ ದೇವಸ್ಥಾನ ಉದ್ಘಾಟಿಸಲು ಸರ್ಜಾ ಕುಟುಂಬ ನಿರ್ಧರಿಸಿದೆ. ಕೊರೋನಾ ಹಾವಳಿಯ ಸಮಯದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು, ಜನರು ಭಾಗಿಯಾಗಲು ಸಾಧ್ಯವಾಗ್ತಿಲ್ಲ. ಹಾಗಾಗಿ ಆನ್ ಲೈನ್ ನಲ್ಲಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ವೀಡಿಯೋ ಮಾಡಿ ಮಾತನಾಡಿರುವ ಆ್ಯಕ್ಷನ್ ಕಿಂಗ್ ಕನ್ನಡಿಗರು ಕುಂಭಾಭಿಷೇಕ ಕಾರ್ಯಕ್ರಮವನ್ನು ಇದ್ದಲ್ಲಿಯೇ ನೋಡಿ. ಎಲ್ಲಾ ಸರಿ ಹೋದ ಮೇಲೆ ಇಲ್ಲಿಗೆ ಬಂದು ಹನುಮಂತನ ದರ್ಶನ ಮಾಡಿ ಅಂತ ಮನವಿ ಮಾಡಿಕೊಂಡಿದ್ದಾರೆ.
35 ಅಡಿ ಎತ್ತರದ ಏಕ ಶಿಲಾ ಹನುಮಂತನ ಮೂರ್ತಿಯನ್ನು ಈ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಲಾಗ್ತಿದೆ. ಕೆಲ ವರ್ಷಗಳ ಹಿಂದೆ ಶಿಲ್ಪಿ ಅಶೋಕ್ ಗುಡಿಯಾರ್ ನೇತೃತ್ವದಲ್ಲಿ ಧ್ಯಾನದ ಭಂಗಿಯಲ್ಲಿರುವ ಹನುಮಂತನ ವಿಗ್ರಹವನ್ನು ಕೆತ್ತನೆ ಮಾಡಲಾಗಿತ್ತು. ಕರ್ನಾಟಕದ ದೇವನಹಳ್ಳಿಯ ಕಲ್ಲಿನ ಕ್ವಾರಿಯಲ್ಲಿ ಈ ವಿಗ್ರಹವನ್ನು ಕೆತ್ತನೆ ಮಾಡಿ ಚೆನ್ನೈಗೆ ಕೊಂಡೊಯ್ಯಲಾಗಿತ್ತು. ಇನ್ನು ಚೆನ್ನೈನ ಗೇರುಗಂಬಕ್ಕಂನಲ್ಲಿರೋ ಅರ್ಜುನ್ ಸರ್ಜಾ ಫಾರ್ಮ್ ಹೌಸ್ ನಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ.
ಆ್ಯಕ್ಷನ್ ಕಿಂಗ್ ಅನ್ನೋ ಹೆಸರಿನಲ್ಲಿ ಅರ್ಜುನ್ ಸರ್ಜಾ ಯೂಟ್ಯೂಬ್ ಚಾನಲ್ ಪ್ರಾರಂಭಿಸಿದ್ದಾರೆ. ಇದೇ ಯೂಟ್ಯೂಬ್ ಚಾನಲ್ ಮೂಲಕ ಹನುಮಂತನ ದೇವಸ್ಥಾನದ ಕುಂಭಾಭಿಷೇಕ ಕಾರ್ಯಕ್ರಮವನ್ನು ಎಲ್ಲರೂ ಮನೆಯಲ್ಲೇ ಕೂತು ಕಣ್ತುಂಬಿಕೊಳ್ಳಬಹುದು.