ಆಂಜನೇಯನ ಪರಮಭಕ್ತ ಅರ್ಜುನ್ ಸರ್ಜಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಹಾಗಂತ ಆ್ಯಕ್ಷನ್ ಕಿಂಗ್ ಅಷ್ಟೇ ಅಲ್ಲ. ಧ್ರುವ ಸರ್ಜಾರಿಂದ ಹಿಡಿದು ಇಡೀ ಕುಟುಂಬವೇ ಹನುಮಂತನ ಆರಾಧಕರು. ಇದೇ ಭಕ್ತಿಯಿಂದ ಆಂಜನೇಯನ ದೇಗುಲ ನಿರ್ಮಿಸಬೇಕು ಅಂತ ಅರ್ಜುನ್ ಸರ್ಜಾ ಸಂಕಲ್ಪ ಮಾಡಿದ್ದರು. ಅದ್ರಂತೆ ಭವ್ಯವಾಗಿ ಆಂಜನೇಯನ ದೇವಸ್ಥಾನ ನಿರ್ಮಾಣಗೊಂಡಿದೆ. ಇದರ ವಿಶೇಷತೆಯೇನು ಅನ್ನೋದನ್ನು ಮುಂದೆ ಓದಿ.
ಚೆನ್ನೈನ ಏರ್ಪೋರ್ಟ್ ಸಮೀಪ ಅರ್ಜುನ್ ಸರ್ಜಾ ಫಾರ್ಮ್ ಹೌಸ್ನಲ್ಲಿ ನಿರ್ಮಾಣಗೊಂಡಿರೋ ದೇಗುಲ ಇಂದು-ನಿನ್ನೆಯ ಕನಸಲ್ಲ. 15 ವರ್ಷಗಳ ಮಹಾಕನಸು. 2006ರಲ್ಲೇ ಅರ್ಜುನ್ ಸರ್ಜಾ ಆಂಜನೇಯನಿಗಾಗಿ ದೇಗುಲ ಕಟ್ಬೇಕು ಅಂತ ತೀರ್ಮಾನ ಮಾಡಿದ್ದರು. ಅಂದಿನಿಂದ ದೇಗುಲದ ವಿನ್ಯಾಸದಿಂದ ಹಿಡಿದು ಪ್ರತಿಯೊಂದೂ ತಾನು ಅಂದುಕೊಂಡಂತೆ ಇರ್ಬೇಕು ಅಂತ ತೀರ್ಮಾನಿಸಿದ್ದರು. ಏಕ ಶೀಲೆಯಲ್ಲೇ ಆಂಜನೇಯನ ಮೂರ್ತಿ ನಿರ್ಮಾಣ ಆಗ್ಬೇಕು. ಕರಾವಳಿ ಹಾಗೂ ಕೇರಳ ಮಾದರಿ ಶೈಲಿಯಲ್ಲೇ ದೇಗುಲ ವಿನ್ಯಾಸವಿರಬೇಕು ಅಂದ್ಕೊಂಡಿದ್ದರು. ಅದ್ರಂತೆ, ಆಂಜನೇಯನ ದೇಗುಲ ನಿರ್ಮಾಣಗೊಂಡಿದೆ.
ಪೇಜಾವರ ಶ್ರೀಗಳು ಆಂಜನೇಯನ ದೇಗುಲವನ್ನು ಲೋಕಾರ್ಪಣೆಗೊಳಿಸಿದ್ರು. ಹದಿನಾರು ವರ್ಷಗಳ ಹಿಂದೆ ವಿಶ್ವಸಂತ ಪೇಜಾವರ ಮಠದ ಹಿರಿಯ ಶ್ರೀಗಳಾಗಿದ್ದ, ಶ್ರೀ ವಿಶ್ವೇಶತೀರ್ಥರು ಈ ದೇವಸ್ಥಾನದ ಭೂಮಿಪೂಜೆ ನೆರವೇರಿಸಿದ್ದರು. ಈ ಅದೇ ಮಠ ಶ್ರೀಗಳು ದೇಗುಲವನ್ನೂ ಲೋಕಾರ್ಪಣೆ ಮಾಡಿದ್ದಾರೆ. ಶ್ರೀ ವಿನಯ್ ಗುರೂಜಿ ಅವರು ಈ ಪ್ರತಿಷ್ಠಾ ಮಹೋತ್ಸವಕ್ಕೆ ಆಗಮಿಸಿ ಆಶೀರ್ವದಿಸಿದರು.
ಕೊವಿಡ್ ನಿಯಮ ಉಲ್ಲಂಘನೆಯಾಗದಂತೆ ಕೇವಲ ಅರ್ಜುನ್ ಸರ್ಜಾ ಕುಟುಂಬ ಮತ್ತು ಕೆಲವೇ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ರು. ತಮ್ಮ ಅಭಿಮಾನಿಗಳಿಗಾಗಿ ಹಾಗೂ ಆಂಜನೇಯನ ಭಕ್ತರಿಗಾಗಿ ಯೂಟ್ಯೂಬ್ನಲ್ಲಿ ಲೋಕಾರ್ಪಣೆಯ ನೇರ ಪ್ರಸಾರ ಮಾಡಲಾಗಿತ್ತು.