ಸೌತ್ ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿ. ಕೆಲ ವರ್ಷಗಳ ಹಿಂದೆ ಯೋಗ ಟೀಚರ್ ಆಗಿದ್ದ ಸ್ವೀಟಿ ‘ಸೂಪರ್’ ಸಿನಿಮಾ ಮೂಲಕ ಸೂಪರ್ ಆಗಿ ಸಿನಿಕರಿಯರ್ ಆರಂಭಿಸಿದ್ದರು. ಗ್ಲಾಮರ್, ಆ್ಯಕ್ಟಿಂಗ್ ಯಾವುದಕ್ಕೂ ಹಿಂದೇಟು ಹಾಕದೇ ಸ್ಟಾರ್ ಪಟ್ಟಕ್ಕೇರಿದ ಕರಾವಳಿ ಬೆಡಗಿ ಟಾಲಿವುಡ್, ಕಾಲಿವುಡ್ ಸೂಪರ್ ಸ್ಟಾರ್ ಗಳ ಜೊತೆ ಸ್ಕ್ರೀನ್ ಶೇರ್ ಮಾಡಿ ಕಮಾಲ್ ಮಾಡಿದರು. ಬಾಹುಬಲಿ ರೀತಿಯ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ನಟಿಸಿ, ಸೈ ಅನ್ನಿಸಿಕೊಂಡರು. ಇಷ್ಟೆಲ್ಲಾ ಸದ್ದು ಮಾಡಿದ ಕನ್ನಡತಿಯನ್ನ ಕನ್ನಡ ಸಿನಿಮಾಗಳಲ್ಲಿ ನೋಡುವ ಅವಕಾಶ ಮಾತ್ರ ಕನ್ನಡ ಸಿನಿರಸಿಕರಿಗೆ ಸಿಗಲಿಲ್ಲ.
ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ವೀವ್ ಆಗಿರೋ ಸ್ವೀಟಿ, ಇದೀಗ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ‘ಕೂ’ಗೆ ಎಂಟ್ರಿ ಕೊಟ್ಟಿದ್ದಾರೆ. ಟ್ವಿಟರ್ ಗೆ ಎದುರಾಗಿ ದೇಶಿಯ ‘ಕೂ’ ಆ್ಯಪ್ ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಸೆಲೆಬ್ರಿಟಿಗಳು ಒಬ್ಬೊಬ್ಬರಾಗಿ ಅಕೌಂಟ್ ಕ್ರಿಯೇಟ್ ಮಾಡ್ತಿದ್ದಾರೆ. ಇದೀಗ ಅನುಷ್ಕಾ ಶೆಟ್ಟಿ ಕೂಡ ‘ಕೂ’ ತಾಣಕ್ಕೆ ಬಂದಿದ್ದಾರೆ. ‘ಕೂ’ ಸೋಷಿಯಲ್ ನೆಟ್ವರ್ಕ್ ಆ್ಯಪ್ ಗೆ ಎಂಟ್ರಿ ಕೊಟ್ಟಿರೋ ವಿಚಾರವನ್ನ ಟ್ವಿಟರ್, ಫೇಸ್ಬುಕ್, ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ‘ಕೂ’ ಅಕೌಂಟ್ ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿ, ಮುಂದಿನ ದಿನಗಳಲ್ಲಿ ಇಂಟ್ರೆಸ್ಟಿಂಗ್ ಅಪ್ ಡೇಟ್ ಗಾಗಿ ಎಲ್ಲರೂ ಫಾಲೋ ಮಾಡುವಂತೆ ಸ್ವೀಟಿ ಹೇಳಿದ್ದಾರೆ.
ನೀವ್ ಹೇಳಿದ್ ಮೇಲೆ ಫಾಲೋ ಮಾಡ್ದೆ ಇರ್ತೀವಾ ಅಂತ ಅಭಿಮಾನಿಗಳು ‘ಕೂ’ ಆ್ಯಪ್ ನಲ್ಲಿ ನೆಚ್ಚಿನ ನಟಿಯನ್ನು ಫಾಲೋ ಮಾಡ್ತಿದ್ದಾರೆ. ಇನ್ನು ಅಕೌಂಟ್ ಕ್ರಿಯೇಟ್ ಮಾಡದವರು ಸ್ವೀಟಿಗಾಗಿ ‘ಕೂ’ ಅಕೌಂಟ್ ಕ್ರಿಯೇಟ್ ಮಾಡಿ ಫಾಲೋ ಮಾಡಲು ಮುಂದಾಗಿದ್ದಾರೆ. ‘ನಿಶಬ್ಧಂ’ ನಂತರ ಕರಾವಳಿ ಚೆಲುವೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಯುವನಟ ನವೀನ್ ಪೊಲಿಶೆಟ್ಟಿ ಜೊತೆ ಅನುಷ್ಕಾ ಶೆಟ್ಟಿ ಹೊಸ ಚಿತ್ರದಲ್ಲಿ ನಟಿಸ್ತಾರೆ ಅನ್ನಲಾಗ್ತಿದೆ.