ರಶ್ಮಿಕಾ ಮಂದಣ್ಣ ಅತೀ ವೇಗವಾಗಿ ಬಾಲಿವುಡ್ ಪ್ರವೇಶಿಸಿದ ಕನ್ನಡದ ನಟಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ದಕ್ಷಿಣದಿಂದ ಉತ್ತರದವರೆಗೂ ಈಗ ಎಲ್ ನೋಡಿದ್ರೂ, ರಶ್ಮಿಕಾ ಮಂದಣ್ಣನೇ ಕಾಣಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತಮಿಳು ಸ್ಟಾರ್ ನಟ ಕಾರ್ತಿ ಜೊತೆ ನಟಿಸಿದ ಸುಲ್ತಾನ್ ಬಿಡುಗಡೆಯಾಗಿದೆ. ಇದ್ರ ಹಿಂದೆನೇ ರಶ್ಮಿಕಾ ಬಾಲಿವುಡ್ಗೆ ಗುಡ್ಬೈ ಹೇಳಿದ್ದಾರೆ.
ರಶ್ಮಿಕಾ ಬಾಲಿವುಡ್ಗೆ ಗುಡ್ಬೈ ಹೇಳಿದ್ದಾರೆ ಅಂದ್ಕೂಡ್ಲೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದಲ್ಲ. ಇದು ರಶ್ಮಿಕಾ ಎರಡನೇ ಬಾಲಿವುಡ್ ಸಿನಿಮಾದ ಹೆಸರು. ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ನಟಿಸುತ್ತಿರೋ ಹೊಚ್ಚ ಹೊಸ ಸಿನಿಮಾ. ಇತ್ತೀಚೆಗಷ್ಟೇ ಗುಡ್ಬೈ ಸಿನಿಮಾ ಸೆಟ್ಟೇರಿದ್ದು, ಏಪ್ರಿಲ್ 04ರಿಂದ ಚಿತ್ರೀಕರಣ ಆರಂಭ ಆಗಲಿದೆ. ಅಮಿತಾಬ್ ಹಾಗೂ ರಶ್ಮಿಕಾ ಇಬ್ಬರೂ ಅಪ್ಪ-ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸೂಪರ್ 30 ಸಿನಿಮಾ ನಿರ್ದೇಶಿಸಿದ್ದ ವಿಕಾಸ್ ಬೆಹಲ್ ಈ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದು, ಬಾಲಾಜಿ ಟೆಲಿಫಿಲಂಸ್ ಹಾಗೂ ರಿಲಯನ್ಸ್ ಎಂಟರ್ಟೈನ್ಮೆಂಟ್ ಜಂಟಿಯಾಗಿ ಈ ಸಿನಿಮಾವನ್ನ ನಿರ್ಮಿಸುತ್ತಿದೆ. ಇದು ಮನಸ್ಸಿನ ಭಾವನೆಗಳೊಂದಿಗೆ ಹೆಣೆದುಕೊಂಡಿರೋ ಕಥೆಯಾಗಿದ್ದು, ಸಿನಿಮಾಗೆ ಬೇಕಾದ ಮನರಂಜನೆಯನ್ನೂ ನೀಡಲಿದೆ.
ರಶ್ಮಿಕಾ ಮಂದಣ್ಣ ಈಗಾಗ್ಲೇ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿದ್ಧಾರ್ಥ ಮಲ್ಹೋತ್ರಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಇತ್ತೀಚೆಗೆ ಬಾಲಿವುಡ್ ನಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿದ ಪುಷ್ಟ ಬಿಡುಗಡೆಯಾಗಬೇಕಿದೆ. ಇನ್ನು ಕನ್ನಡದಲ್ಲಿ ಪೊಗರು ರಿಲೀಸ್ ಆಗಿದ್ದು, ಹೊಸ ಕನ್ನಡ ಸಿನಿಮಾವನ್ನ ರಶ್ಮಿಕಾ ಒಪ್ಪಿಕೊಂಡಿಲ್ಲ.