ಕೆಲವು ಚಿತ್ರಗಳೇ ಹಾಗೆ… ಅವು ತಡವಾಗಿದ್ದರ ಬಗ್ಗೆ ಆಗುವ ಬೇಸರವೆಲ್ಲಾ ಕಳೆಯುವಂತೆ ಮೂಡಿಬರುತ್ತವೆ. ಒಂದಿಷ್ಟೂ ನಿರಾಸೆಯಾಗದಂತೆ, ಅಂದುಕೊಂಡದ್ದಕ್ಕಿಂತಲೂ ಅದ್ಭುತ ಎನಿಸುವಂತೆ ಇರುತ್ತವೆ. ಇದಕ್ಕಾಗಿ ಇಷ್ಟು ದಿನ ಕಾದದ್ದು ಸಾರ್ಥಕ ಎನಿಸಿಬಿಡುತ್ತವೆ. ಎಸ್ ಎಸ್ ರಾಜಮೌಳಿಯ ಹೊಸಾ ಚಿತ್ರದ ಸೀತೆಯನ್ನು ನೋಡಿದಾಗ ಸಿನಿರಸಿಕರಿಗೆ ಹಾಗನಿಸಿದ್ದರಲ್ಲಿ ಅತಿಶಯೋಕ್ತಿ ಇಲ್ಲವೇ ಇಲ್ಲ.


ಈ ಸೀತೆ ಅಲ್ಲೂರಿ ಸೀತಾರಾಮರಾಜುವಿನ ಮನದನ್ನೆ. ಎಸ್ ಎಸ್ ರಾಮಜೌಳಿ ನಿರ್ದೇಶನದ ಬಿಗ್ ಬಜೆಟ್ ಚಿತ್ರ RRRನಲ್ಲಿ ಸೀತೆಯಾಗಿ ಕಾಣಿಸಿಕೊಳ್ತಿರೋದು ಬಾಲಿವುಡ್ ಬೆಡಗಿ ಆಲಿಯಾ ಭಟ್. ಆಲಿಯಾ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ತಿದ್ದಾರೆ ಎಂದಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚೇ ಇತ್ತು. ಬಾಲಿವುಡ್ ನ ಬಿಂದಾಸ್ ಬೆಡಗಿ ರಾಜಮೌಲಿಯ ಐತಿಹಾಸಿಕ-ಪೌರಾಣಿಕ-ಕಾಲ್ಪನಿಕ ಪಾತ್ರಕ್ಕೆ ಹೇಗೆ ಹೊಂದುತ್ತಾರೆ? ರಾಜಮೌಳಿಯ ಕಲ್ಪನೆಗೆ ಆಲಿಯಾ ತುಂಬುವ ಬಣ್ಣ ಹೇಗಿರುತ್ತದೆ ಎನ್ನುವ ಪ್ರಶ್ನೆಗಳು ಸರ್ವೇಸಾಮಾನ್ಯ ಎನ್ನುವಂತೆ ಚರ್ಚೆಯಾಗಿತ್ತು.
ಇವೆಲ್ಲದಕ್ಕೂ ತೆರೆ ಎಳೆಯುವಂತೆ ಹೊರಬಂದಿದ್ದಾಳೆ ಸೀತೆ. ಆಲಿಯಾ ಭಟ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಸೀತೆಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ನಾಳೆ ಸೀತೆಯ ಅನಾವರಣ ಎಂದು ರಾಜಮೌಳಿ ತಿಳಿಸಿದ್ದು ಆಲಿಯಾ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿತ್ತು. ಇಂದು ಸರಳ ಸುಂದರ ಸೀತೆಯನ್ನು ನೋಡಿ ಅಭಿಮಾನಿಗಳಿಗೆ ಮಾತೇ ಹೊರಡುತ್ತಿಲ್ಲವಂತೆ. ಹಸಿರು ಸೀರೆ ಉಟ್ಟು, ಹೆಚ್ಚು ಅಲಂಕಾರವಿಲ್ಲದ, ದಟ್ಟ ಹೆರಳಿನ ಸ್ನಿಗ್ಧ ಸುಂದರಿ ಈ ಸೀತೆ. ರಾಮನ ವಿಗ್ರಹದ ಎದುರು ಶರಣಾಗಿ ಕುಳಿತಿದ್ದ ಸೀತೆ ಜಗತ್ತಿನ ಪರಿವೆಯೇ ಇಲ್ಲದಂತಿದ್ದಾಳೆ.
ಆಲಿಯಾ ಈ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾಳೆ ಅಂತ ಈಗಲೇ ಅನಿಸಿದರೂ ಹೆಚ್ಚಲ್ಲ, ಅಷ್ಟು ಸುಂದರವಾಗಿ ಈ ಮೊದಲ ನೋಟ. ರಾಜಮೌಳಿ ನಿರ್ದೇಶನದ RRRನಲ್ಲಿ ರಾಮಚರಣ್ ತೇಜ, ಜ್ಯೂನಿಯರ್ ಎನ್ ಟಿ ಆರ್, ಆಲಿಯಾ ಭಟ್ ಅಲ್ಲದೇ ಅಜಯ್ ದೇವಗನ್ ಕೂಡಾ ನಟಿಸಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ನಾನಾ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಈ ಚಿತ್ರ. ಬಾಹುಬಲಿ ಚಿತ್ರಗಳ ಮೂಲಕ ಭಾರತೀಯ ಸಿನಿಮಾದ ಹೊಸಾ ಭಾಷ್ಯ ಬರೆದ ಎಸ್ ಎಸ್ ರಾಜಮೌಳಿ RRR ಮೂಲಕ ಮಾಡೋ ಮೋಡಿಯನ್ನು ನೋಡೋಕೆ ಜಗತ್ತೇ ಕಾಯುತ್ತಿದೆ.