ಒಂದ್ಕಡೆ ₹25 ಕೋಟಿ ವಂಚನೆ ಯತ್ನ ಪ್ರಕರಣ ಜೋರಾಗಿ ಸದ್ದು ಮಾಡುತ್ತಿದ್ದರೆ, ಮತ್ತೊಂದ್ಕಡೆ ದರ್ಶನ್ ಹೊಸ ಚಿತ್ರದ ಫೈನಲ್ ಮೀಟಿಂಗ್ ಮುಗಿಸಿದ್ದಾರೆ. ರಾಬರ್ಟ್ ನಂತ್ರ ಯಾವ ಚಿತ್ರದಲ್ಲಿ ಡಿ ಬಾಸ್ ನಟಿಸ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಶೈಲಜಾ ನಾಗ್ ಮತ್ತು ಬಿ. ಸುರೇಶ ನಿರ್ಮಾಣದ ಚಿತ್ರಕ್ಕೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಲಾಕ್ಡೌನ್ ನಿಂದ ದರ್ಶನ್ ನಟಿಸಬೇಕಿದ್ದ ರಾಜಾ ವೀರ ಮದಕರಿ ನಾಯಕ ಸಿನಿಮಾ ನಿಂತೋಗಿದೆ. ಇದೀಗ ವಿ. ಹರಿಕೃಷ್ಣ ನಿರ್ದೇಶನಲ್ಲಿ ದರ್ಶನ್ ನಟಿಸೋದು ಪಕ್ಕಾ ಆಗಿದೆ. ಅಂದ ಹಾಗೆ ಇದು ದರ್ಶನ್ ಅಭಿನಯದ 55ನೇ ಚಿತ್ರ. ಯಜಮಾನ ಚಿತ್ರದಲ್ಲೂ ಹರಿಕೃಷ್ಣ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೀಗ ಅದೇ ಕಾಂಬಿನೇಷನ್ ನಲ್ಲಿ ಸಿನಿಮಾ ನಿರ್ಮಾಣಕ್ಕೆ ತಯಾರಿ ಶುರುವಾಗಿದೆ.
ಯಜಮಾನ ಚಿತ್ರದಲ್ಲಿ ಗಾಣ ನಂಬಿಕೊಂಡು ಬದುಕುವ ಹಳ್ಳಿ ಜನರ ನಾಯಕನಾಗಿ ಚಾಲೆಂಜಿಂಗ್ ಸ್ಟಾರ್ ಅಬ್ಬರಿಸಿದ್ದರು. ಕಮರ್ಷಿಯಲ್ ಎಲಿಮೆಂಟ್ಸ್ ಜೊತೆಗೆ ಒಂದೊಳ್ಳೆ ಸಂದೇಶವನ್ನು ಚಿತ್ರದಲ್ಲಿ ಸಾರಲಾಗಿತ್ತು. ಇದೀಗ ಹೊಸ ಚಿತ್ರದಲ್ಲೂ ಅದೇ ಸೂತ್ರವನ್ನು ಅನುಸರಿಸಲಾಗುತ್ತಿದೆ. ದರ್ಶನ್ ಅಭಿಮಾನಿಗಳು ಕೇಳುವ ಡೈಲಾಗ್ಸ್, ಸಾಂಗ್ಸ್, ಆ್ಯಕ್ಷನ್ ಜೊತೆಗೆ ನಮ್ಮತನವನ್ನು ತೋರಿಸುವಂತಹ ಕಥೆಯನ್ನು ವಿ. ಹರಿಕೃಷ್ಣ ಸಿದ್ಧಪಡಿಸಿದ್ದಾರೆ. ಬಿ. ಸುರೇಶ ನಿರ್ಮಾಣದ ಸಿನಿಮಾ ಅಂದಮೇಲೆ ಸದಭಿರುಚಿಯ ಸಿನಿಮಾ ಆಗಿರುತ್ತೆ ಅನ್ನೋದನ್ನ ಬಿಡಿಸಿ ಹೇಳುವುದು ಬೇಕಾಗಿಲ್ಲ.
ದರ್ಶನ್ ಸಿನಿಮಾ ಅಂದಮೇಲೆ ವಿ. ಹರಿಕೃಷ್ಣ ಮ್ಯೂಸಿಕ್ ಇರಲೇಬೇಕು. ಖುದ್ದು ಹರಿಕೃಷ್ಣ ತಾವೇ ಸಿನಿಮಾ ನಿರ್ದೇಶನ ಕೂಡ ಮಾಡುತ್ತಿರೋದ್ರಿಂದ ಅವರಿಂದ ಮತ್ತೊಂದು ಹಿಟ್ ಆಲ್ಬಮ್ ನಿರೀಕ್ಷಿಸಬಹುದು. ಮದಕರಿ ನಾಯಕ ಸಿನಿಮಾ ನಿಂತು ಹೋಯ್ತು ಅಂತ ಗೊತ್ತಾದಾಗ ರಾಕ್ ಲೈನ್ ಬ್ಯಾನರ್ ನಲ್ಲೇ ‘ಗೋಲ್ಡ್ ರಿಂಗ್’ ಅನ್ನೋ ಚಿತ್ರದಲ್ಲಿ ದರ್ಶನ್ ನಟಿಸ್ತಾರೆ ಅನ್ನೋ ಸುದ್ದಿ ಬಂದಿತ್ತು. ಆದರೆ ಶೈಲಜಾ ನಾಗ್ ನಿರ್ಮಾಣದಲ್ಲಿ ದರ್ಶನ್ ಹೊಸ ಸಿನಿಮಾ ಸೆಟ್ಟೇರುತ್ತಿದ್ದು, ‘ಗೋಲ್ಡ್ ರಿಂಗ್’ ಕಥೆ ಏನಾಗುತ್ತೋ ಗೊತ್ತಿಲ್ಲ. ಶೀಘ್ರದಲ್ಲೇ ಚಿತ್ರದ ಟೈಟಲ್ ಸೇರಿದಂತೆ ಇನ್ನುಳಿದ ಮಾಹಿತಿ ಸಿಗಲಿದೆ. ವರ್ಷಾಂತ್ಯಕ್ಕೆ ಅಭಿಮಾನಿಗಳನ್ನು ರಂಜಿಸೋಕೆ ರಾಬರ್ಟ್ ದರ್ಶನ್ ಮತ್ತೆ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ.