ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಹೆಚ್ಎಸ್ಆರ್ ಲೇಔಟ್ನಲ್ಲಿದ್ದ ತಮ್ಮ ಮನೆಯನ್ನ ಮಾರಾಟ ಮಾಡಿದ್ದಾರೆ. ‘ಆಪ್ತಮಿತ್ರ’ ಚಿತ್ರದ ಲಾಭದಿಂದ ಖರೀದಿಸಿದ್ದ ಮನೆ ಅದು. ದ್ವಾರಕೀಶ್ ಅವರ ಬಂಗಲೆಯನ್ನ ಬರೋಬ್ಬರಿ 10.5 ಕೋಟಿಗೆ ನಟ- ನಿರ್ದೇಶಕ ರಿಷಬ್ ಶೆಟ್ಟಿ ಖರೀದಿಸಿರುವುದು ವಿಶೇಷ. ಸೋಲು ಗೆಲುವು ಚಿತ್ರರಂಗದಲ್ಲಿ ಸಾಮಾನ್ಯ. ಒಂದೇ ಒಂದು ಸಿನಿಮಾದಿಂದ ಕೋಟಿ ಕೋಟಿ ಬಾಚಬಹುದು. ಒಂದೇ ಸಿನಿಮಾದಿಂದ ಸರ್ವಸ್ವವನ್ನು ಕಳೆದುಕೊಂಡು ಬೀದಿಗೆ ಬರಬಹುದು. ದ್ವಾರಕೀಶ್ ಅವರು ಈಗಾಗಲೇ ಹಲವು ಬಾರಿ ಹೀಗೆ ಮನೆ ಮಾರಿದ್ದಾರೆ. ಮತ್ತೆ ಸಿನಿಮಾ ಮಾಡಿ ಗೆದ್ದು ಹೊಸ ಮನೆ ಖರೀದಿಸಿದ್ದಾರೆ. ಅಂದಹಾಗೆ ಈಗ ಮಾರಾಟ ಮಾಡಿರುವುದು 13ನೇ ಮನೆ.
ದ್ವಾರಕೀಶ್ ನಿರ್ಮಾಣದ ‘ಆಯುಷ್ಮಾನ್ಭವ’ ಸಿನಿಮಾ ಹೀನಾಯ ಸೋಲು ಕಂಡಿತ್ತು. ಈ ಚಿತ್ರದಿಂದ ಸಾಕಷ್ಟು ಸಾಲ ಮಾಡಿಕೊಳ್ಳಬೇಕಾಯಿತು. ಇದೇ ವಿಚಾರವಾಗಿ ನಿರ್ಮಾಪಕ ಜಯಣ್ಣ ಅವರ ಜೊತೆಗೂ ಗಲಾಟೆ ಆಗಿತ್ತು. ಕೊನೆಗೂ ಸಾಲದಿಂದ ಹೊರಬರಲು ಬಂಗಲೆ ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ರಿಷಬ್ ಶೆಟ್ಟಿ ನಿರ್ಮಿಸಿ, ನಟಿಸಿರೋ ‘ಹೀರೋ’ ಚಿತ್ರದ ಸಖತ್ ಸೌಂಡ್ ಮಾಡ್ತಿದೆ. ಈ ಚಿತ್ರದಿಂದ ಬಂದ ಹಣದಲ್ಲಿ ರಿಷಬ್ ಶೆಟ್ಟಿ ದ್ವಾರಕೀಶ್ ಅವರ ಮನೆ ಕೊಂಡುಕೊಂಡಿದ್ದಾರೆ. ಅಂದಹಾಗೆ ‘ಹೀರೋ’ ಚಿತ್ರದ ವಿತರಣೆ ಹಕ್ಕು ಜಯಣ್ಣ ಖರೀದಿಸಿದ್ದಾರೆ.
ಮನೆ ಮಾರಾಟ ಮಾಡಿದ್ರ ಬಗ್ಗೆ ಪ್ರತಿಕ್ರಿಯಿಸಿರೋ ಹಿರಿಯ ನಟ ದ್ವಾರಕೀಶ್ “ಇದೇನು ನನಗೆ ಹೊಸದಲ್ಲ. ವ್ಯವಹಾರದಲ್ಲಿ ಲಾಭ ನಷ್ಟ ಮಾಮೂಲು. ಇದ್ದಾಗ ಮನೆ ಖರೀದಿಸೋದು, ನಷ್ಟಕ್ಕೆ ಅನುಭವಿಸಿದಾಗ ಮಾರಾಟ ಮಾಡೋದು ಇದ್ದಿದ್ದೇ. ಮತ್ತೆ ಗೆದ್ರೆ ಮತ್ತೊಂದು ಮನೆ ಖರೀದಿಸುತ್ತೀನಿ” ಅಂದಿದ್ದಾರೆ.