ಸಿಂಪಲ್ಸ್ಟಾರ್ ರಕ್ಷಿತ್ ಶೆಟ್ಟಿ 38ನೇ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ತಿದ್ದಾರೆ. ಲಾಕ್ಡೌನ್ನಿಂದಾಗಿ ಸತತ ಎರಡನೇ ಬಾರಿ ಬರ್ತ್ಡೇಯಂದು ಅಭಿಮಾನಿಗಳಿಂದ ದೂರು ಉಳಿದಿದ್ದಾರೆ. ಲಾಕ್ಡೌನ್, ಕೊರೊನಾ ಅಂತ ಸಿಂಪಲ್ ಆಗಿ ಸಿಂಪಲ್ಸ್ಟಾರ್ ಬರ್ತ್ಡೇ ಆಚರಿಸಿಕೊಳ್ಳಲಿದ್ದಾರೆ. ಈ ಹುಟ್ಟುಹಬ್ಬದ ಪ್ರಯುಕ್ತ ರಕ್ಷಿತ್ ಅಭಿನಯದ ಸಪ್ತಸಾಗರದಾಚೆ ಹಾಗೂ 777 ಚಾರ್ಲಿ ಎರಡೂ ಚಿತ್ರತಂಡವೂ ರಕ್ಷಿತ್ ಫ್ಯಾನ್ಸ್ಗೆ ಗಿಫ್ಟ್ ಕೊಟ್ಟಿದ್ದಾರೆ.
ಹೇಮಂತ್ ರಾವ್ ನಿರ್ದೇಶಿಸುತ್ತಿರುವ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಪೋಸ್ಟರ್ ಈಗಾಗ್ಲೇ ಬಿಡುಗಡೆಯಾಗಿದೆ. ವೈಟ್ ಅಂಡ್ ಬ್ಲ್ಯಾಕ್ ಪೋಸ್ಟರ್ ರಿಲೀಸ್ ಆಗಿದ್ದು, ರಕ್ಷಿತ್ ಇಡೀ ಚಿತ್ರತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಬಾರಿ ಬರ್ತ್ ಡೇಯ ರಿಯಲ್ ಗಿಫ್ಟ್ ಅಂದ್ರೆ, 777 ಚಾರ್ಲಿ ಟೀಸರ್. ರಕ್ಷಿತ್ ಹುಟ್ಟುಹಬ್ಬಕ್ಕೆ ಇನ್ನೂ ಒಂದು ವಾರವಿರುವಂತೆ ಚಾರ್ಲಿ ಮೇಕಿಂಗ್ ತುಣುಕುಗಳು ಕುತೂಹಲ ಕೆರಳಿಸುತ್ತಲೇ ಇತ್ತು. ಈಗ ಸರಿಯಾಗಿ 11.04ಕ್ಕೆ ಚಾರ್ಲಿ ಟೀಸರ್ ಬಿಡುಗಡೆಯಾಗಲಿದೆ. ದಕ್ಷಿಣ ಭಾರತದ ದಿಗ್ಗಜರು ಈ ಚಿತ್ರದ ಟೀಸರ್ ರಿಲೀಸ್ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.
777 ಚಾರ್ಲಿ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಜೊತೆಯಾಗಿದ್ರೆ, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಬೆಂಬಲವಾಗಿ ನಿಂತಿದ್ದಾರೆ. ಇನ್ನು ತೆಲುಗು ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಹಲವರೊಂದಿಗೆ ಮಾತುಕತೆ ನಡೆಯುತ್ತಿದೆ. ಅಂದ್ಹಾಗೆ 777 ಚಾರ್ಲಿಯ ಮಲಯಾಳಂ ಟೀಸರ್ ಅನ್ನು ಮಾಲಿವುಡ್ನ 8 ಮಂದಿ ತಾರೆಯರು ಬಿಡುಗಡೆ ಮಾಡಲಿದ್ದಾರೆ.
ಅವನೇ ಶ್ರೀಮನ್ನಾರಾಯಣ ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟಾಗ 777 ಚಾರ್ಲಿ ಚಿತ್ರದ ಕೆಲವು ಭಾಗ ಚಿತ್ರೀಕರಣ ನಡೆದಿತ್ತು. ಕಳೆದ ವರ್ಷವೇ ಬಿಡುಗಡೆಯಾಗ್ಬೇಕಿದ್ದ ಸಿನಿಮಾ ಲಾಕ್ಡೌನ್ನಲ್ಲಿ ಲಾಕ್ ಆಗಿದ್ದರಿಂದ ಸ್ವಲ್ಪ ತಡವಾಗಿದೆ. ಬಹುತೇಕ ಸಿನಿಮಾ ಮುಗಿದಿದ್ದು, ಕೊರೊನಾ, ಲಾಕ್ಡೌನ್ ನೋಡ್ಕೊಂಡು ಸಿನಿಮಾ ರಿಲೀಸ್ ಮಾಡೋಕೆ ಪ್ಲ್ಯಾನ್ ಮಾಡುತ್ತಿದೆ ಚಿತ್ರತಂಡ.