ರಕ್ಷಿತ್ ಶೆಟ್ಟಿ ಅಭಿನಯದ “777 ಚಾರ್ಲಿ” ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇತ್ತಿಚೀಗೆ ರಕ್ಷಿತ್ ಶೆಟ್ಟಿ ಬರ್ತಡೇ ಸ್ಪೆಷಲ್ಲಾಗಿ ಬಂದಿರೋ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. 5 ಭಾಷೆಗಳಲ್ಲಿ ಟೀಸರ್ ಬೇಜಾನ್ ಸೌಂಡ್ ಮಾಡ್ತಿದೆ. ಚಿತ್ರದಲ್ಲಿ ನಾಯಿ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧದ ಕಥೆ ಹೇಳಲಾಗ್ತಿದೆ. ಚಿತ್ರದಲ್ಲಿ ಲ್ಯಾಬ್ರಡಾರ್ ನಾಯಿಯೊಂದು ಮುಖ್ಯವಾದ ಪಾತ್ರದಲ್ಲಿ ನಟಿಸಿದೆ. ನಿರ್ದೇಶಕ ಕಿರಣ್ ರಾಜ್ ಬಹಳ ಮುತುವರ್ಜಿಯಿಂದ ಪ್ರತಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅದು ಟೀಸರ್ ನಲ್ಲೇ ಗೊತ್ತಾಗ್ತಿದೆ. ಇನ್ನು 777 ಚಾರ್ಲಿ ಹಾಲಿವುಡ್ ಸಿನಿಮಾದ ಕಾಪಿ ಅಂತ ನೆಟ್ಟಿಗರೊಬ್ಬರು, ನಿರ್ದೇಶಕರ ಕಾಲೆಳೆದಿದ್ದಾರೆ. ನಾಚಿಕೆ ಆಗೋದಿಲ್ವಾ ಅಂತಲೂ ಕೇಳಿದ್ದಾರೆ.
ನಿರ್ದೇಶಕ ಕಿರಣ್ ರಾಜ್ ಮಾಡಿರೋ ಟ್ವೀಟ್ ಗೆ ಕಾಮೆಂಟ್ ಬಾಕ್ಸ್ ನಲ್ಲಿ ನೆಟ್ಟಿಗನೊಬ್ಬ ‘ನಿಮ್ಮ ಸಿನಿಮಾ ಇಂಗ್ಲೀಷಿನ A DOG’S WAY HOME ಕಾಪಿ. ನಾಚಿಕೆ ಆಗುವುದಿಲ್ಲ ಕಥೆ ಕದಿಯೋಕೆ’ ಅಂತ ಕಾಮೆಂಟ್ ಮಾಡಿದ್ದಾನೆ. ಇದಕ್ಕೆ ನಯವಾಗಿಯೇ ಉತ್ತರಿಸಿರುವ ನಿರ್ದೇಶಕರು ‘ಸಿನಿಮಾ ಬಿಡುಗಡೆ ನಂತರ ಇದೇ ವಿಚಾರವಾಗಿ ಚರ್ಚಿಸಲು ನಿಮ್ಮನ್ನು ಆಹ್ವಾನಿಸುತ್ತೇನೆ. ನಿಜಕ್ಕೂ ಅದು ಮಜವಾಗಿರುತ್ತದೆ’ ಅಂತ ಪ್ರತ್ಯುತ್ತರ ನೀಡಿದ್ದಾರೆ.
ಈ ವಿಚಾರವಾಗಿ ಸಾಕಷ್ಟು ಜನ ನಿರ್ದೇಶಕರು ಬೆಂಬಲಕ್ಕೆ ಬಂದಿದ್ದಾರೆ. ಸುಮ್ಮನೆ ನಿಮ್ಮ ಗಮನ ಸೆಳೆಯಲು ಇಂತಹ ಕಾಮೆಂಟ್ ಮಾಡಿದ್ದಾನೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡಿ ಅಂತ ಬೆಂಬಲಿಸಿ, ಕಾಮೆಂಟ್ ಮಾಡಿದ್ದಾರೆ. 2019ರಲ್ಲಿ A Dog’s Way Home ಸಿನಿಮಾ ಹಾಲಿವುಡ್ ನಲ್ಲಿ ಬಂದಿತ್ತು. ಆ ಚಿತ್ರವನ್ನ ಹೋಲುವಂತಹ ಒಂದಷ್ಟು ದೃಶ್ಯಗಳು 777 ಚಾರ್ಲಿ ಟೀಸರ್ನಲ್ಲಿವೆ. ಇನ್ನು ಆ ಚಿತ್ರದಲ್ಲೂ ಹಿಮ ಪರ್ವತದಲ್ಲಿ ಒಂದಷ್ಟು ಸನ್ನಿವೇಶಗಳಿವೆ. ಕೆಲ ದಿನಗಳ ಹಿಂದೆ ಚಾರ್ಲಿ ತಂಡ ಕೂಡ ಕಾಶ್ಮೀರದಲ್ಲಿ ಹಿಮಪವರ್ತದಲ್ಲಿ ಕೆಲ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಅದನ್ನೆಲ್ಲಾ ತಾಳೆ ಹಾಕಿ ಆ ನೆಟ್ಟಿಗ ಇಂತಹ ಕಾಮೆಂಟ್ ಮಾಡಿರಬಹುದು. ಆದರೆ A Dog’s Way Home ಸಿನಿಮಾ ಬಿಡುಗಡೆಗೂ ಮೊದಲೇ 777 ಚಾರ್ಲಿ ಸಿನಿಮಾ ಶೂಟಿಂಗ್ ಶುರುವಾಗಿತ್ತು. ಹಾಗಾಗಿ ಕಿರಣ್ ರಾಜ್ ಸಿನಿಮಾ ಕಾಪಿ ಆಗಿರೋದಕ್ಕೆ ಸಾಧ್ಯವೇ ಇಲ್ಲ.
ಈ ವೇಳೆ ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾದ ಟೀಸರ್ಗೆ ನೀಡಿರೋ ಪ್ರತಿಕ್ರಿಯೆಗೆ ಫುಲ್ ಖುಷಿಯಾಗಿದ್ದು, ಟೀಸರ್ ನೋಡಿ ಮೆಚ್ಚಿದವ್ರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.