RRR ಈ ಸಿನಿಮಾ ನೋಡಲು ಇಡೀ ದೇಶವೇ ಕಾದು ಕೂತಿದೆ. ಸಿನಿಪ್ರೇಮಿಗಳು ತೆರೆಮೇಲೆ ರಾಜಮೌಳಿ ಚಮತ್ಕಾರ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಸಿನಿಮಾ ರಿಲೀಸ್ ಆಗುತ್ತೋ ಕಾದು ಕೂತಿದ್ದವರಿಗೆ ರಾಜಮೌಳಿ ಕೊನೆ ಸರ್ಪ್ರೈಸ್ ಕೊಟ್ಟಿದ್ದರು. ಅಕ್ಟೋಬರ್ 13ರಂದು ಸಿನಿಮಾ ಬಿಡುಗಡೆ ಮಾಡೋದಾಗಿ ಘೋಷಿಸಿದ್ದರು. ಇದೇ ಖುಷಿಯಲ್ಲಿರುವಾಗಲೇ ಮತ್ತೆ ರಿಲೀಸ್ ಡೇಟ್ ಮುಂದಕ್ಕೆ ಹೋಗ್ಬಹುದು ಅನ್ನೋ ಆತಂಕ ಎದುರಾಗಿದೆ. ಅದಕ್ಕೆ ಕಾರಣ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್.
ಬೋನಿ ಕಪೂರ್ ನಿರ್ಮಿಸಿರೋ ಕ್ರೀಡಾ ಸಿನಿಮಾ ಮೈದಾನ್ ಕೂಡ ಅಕ್ಟೋಬರ್ 15ಕ್ಕೆ ರಿಲೀಸ್ ಆಗುತ್ತಿದೆ. ದಸರಾ ಹಬ್ಬಕ್ಕೇ ಬಿಡುಗಡೆ ಮಾಡುವುದಾಗಿ ಆರು ತಿಂಗಳು ಮುನ್ನವೇ ಘೋಷಣೆ ಮಾಡಿದ್ದರು. ಆದ್ರೀಗ RRR ಎರಡು ದಿನ ಮುನ್ನವೇ ರಿಲೀಸ್ ಆಗ್ತಿರೋದ್ರಿಂದ ಬೋನಿ ಕಪೂರ್ ಮುನಿಸಿಕೊಂಡಿದ್ದಾರೆ. ರಾಜಮೌಳಿ ಮಾಡಿರೋದು ನೈತಿಕತೆಗೆ ವಿರುದ್ಧ ಎಂದಿದ್ದಾರೆ.
ಇಬ್ಬರೂ ರಿಲೀಸ್ ಡೇಟ್ ಅನ್ನ ಮುಂದೆ ಹಾಕಲು ಸಿದ್ಧರಿಲ್ಲ. ಹೀಗಾಗಿ ಬೋನಿ ಕಪೂರ್ ಹಾಗೂ ರಾಜಮೌಳಿ ಕಿತ್ತಾಡುತ್ತಿರುವಾಗಲೇ ಅಜಯ್ ದೇವಗನ್ ಮಧ್ಯೆ ನುಗ್ಗಿದ್ದಾರೆ. ಇಬ್ಬರನ್ನೂ ಎದುರು ಬದುರು ಕೂರಿಸಿ ಸಮಸ್ಯೆಯನ್ನ ಪರಿಹರಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಎರಡೂ ಸಿನಿಮಾಗಳಲ್ಲೂ ಅಜಯ್ ದೇವಗನ್ ನಟಿಸಿರೋದ್ರಿಂದ ಈ ಬಿಕ್ಕಟ್ಟನ್ನ ಪರಿಹರಿಸಲು ಸ್ವತ: ಮೈದಾನ್ ನಟನೇ ಮುಂದೆ ಬಂದಿದ್ದಾರೆ.
ಆದರೆ, ಬೋನಿ ಕಪೂರ್ ಹಾಗೂ ರಾಜಮೌಳಿ ಇಬ್ಬರೂ ಹಿಂದೆ ಸರಿಯೋ ಮನಸ್ಸು ಮಾಡುತ್ತಿಲ್ಲ. RRR ಹಾಗೂ ಮೈದಾನ್ ಎರಡೂ ಸಿನಿಮಾಗಳಲ್ಲೂ ಅಜಯ್ ದೇವಗನ್ ನಟಿಸಿರೋದ್ರಿಂದ ಸಮಸ್ಯೆ ಅಷ್ಟು ಸುಲಭಕ್ಕೆ ಬಗೆಹರಿಯೋ ಹಾಗೆ ಕಾಣಿಸುತ್ತಿಲ್ಲ. ಈಗ ಅಜಯ್ ದೇವಗನ್ ಮಧ್ಯೆ ಪ್ರವೇಶಿಸಿರೋದ್ರಿಂದ ಸಮಸ್ಯೆಯನ್ನ ಹೇಗೆ ಬಗೆಹರಿಸುತ್ತಾರೆ? ಯಾವ ಸಿನಿಮಾ ಹಿಂದಕ್ಕೆ ಸರಿಯುತ್ತೆ. ಯಾವುದು ರಿಲೀಸ್ ಆಗುತ್ತೆ? ಅನ್ನೋದು ಕುತೂಹಲ ಮೂಡಿಸಿದೆ.