ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ದುಬೈ ನೆಚ್ಚಿನ ತಾಣ. ಇತ್ತೀಚೆಗೆ ತನ್ನ ಪತ್ನಿ ನಮೃತಾ ಶಿರೋಡ್ಕರ್ ಜನ್ಮದಿನವನ್ನೂ ಇಲ್ಲೇ ಆಚರಿಸಿದ್ದರು. ಅಲ್ಲದೇ ಕೆಲವು ದಿನಗಳಿಂದ ಮಹೇಶ್ ಬಾಬು ದುಬೈನಲ್ಲೇ ನೆಲೆಸಿದ್ದಾರೆ. ತನ್ನ ಹೊಚ್ಚ ಹೊಸ ಚಿತ್ರದ ಶೂಟಿಂಗ್ಗಾಗಿ ದುಬೈನಲ್ಲಿದ್ದ ಮಹೇಶ್ ಬಾಬು ದುಬಾರಿಗೆ ನಗರಕ್ಕೆ ಗುಡ್ ಬೈ ಹೇಳಿದ್ದಾರೆ.
ಮಹೇಶ್ ಬಾಬು ದುಬೈ ಹಾಗೂ ಶಹರ್ಜಾದಲ್ಲಿ ಕೆಲವು ದಿನಗಳಿಂದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಸರ್ಕಾರು ವಾರಿ ಪಾಟ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಮರಳುಗಾಡಿನಲ್ಲಿ ಈ ಚಿತ್ರದ ಆ್ಯಕ್ಷನ್ ಸನ್ನಿವೇಶಗಳು ಹಾಗೂ ಚೇಸಿಂಗ್ ದೃಶ್ಯಗಳನ್ನ ಅದ್ಧೂರಿಯಾಗಿ ಚಿತ್ರೀಕರಣ ಮಾಡಿದ್ದಾರೆ. ಇದರ ಜೊತೆ ಜೊತೆನೇ ಪಾಷ್ ಕ್ಯಾಸಿನೋಗಳಲ್ಲಿ ಕೆಲವು ಸೀನ್ ಗಳನ್ನೂ ಚಿತ್ರೀಕರಿಸಲಾಗಿದೆ.
ಮಹೇಶ್ ಬಾಬು ಜೊತೆ ಚಿತ್ರದ ನಾಯಕಿ ಕೀರ್ತಿ ಸುರೇಶ್ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದು ಮಹೇಶ್ ಬಾಬು ಹಾಗೂ ಕೀರ್ತೀ ಸುರೇಶ್ ಕಾಂಬಿನೇಷನ್ನ ಮೊದಲ ಸಿನಿಮಾ. ಮಹಾನಟಿ ಸಿನಿಮಾದ ಬಳಿಕ ಕೀರ್ತಿಗೆ ದುಬಾರಿ ಸಿನಿಮಾಗೇ ಸಿಗುತ್ತಿದ್ದು, ಮಹೇಶ್ ಬಾಬು ಸಿನಿಮಾ ಕೂಡ ಬಿಗ್ ಬಜೆಟ್ ಚಿತ್ರವಾಗಿದೆ.
ಸರ್ಕಾರು ವಾರಿ ಪಾಟ ಚಿತ್ರವನ್ನ ಪರಶುರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ ಸೂಪರ್ ಹಿಟ್ ಗೀತಾ ಗೋವಿಂದಂ ಸಿನಿಮಾವನ್ನ ನಿರ್ದೇಶಿಸಿದ್ದರು. ಈಗ ಮಹೇಶ್ ಬಾಬುಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ದುಬೈನಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ತಾಯ್ನಾಡಿಗೆ ವಾಪಾಸ್ ಆಗಿದೆ.