ಚೆನ್ನೈನ ಪೋಯೆಸ್ ಗಾರ್ಡನ್ ಬಹಳ ಪ್ರತಿಷ್ಠಿತ ಏರಿಯಾ. ಮಾಜಿ ಮುಖ್ಯಮಂತ್ರಿ ಜಯಲಲಿತಾ, ಸೂಪರ್ ಸ್ಟಾರ್ ರಜನಿಕಾಂತ್ ಮುಂತಾದವರ ಮನೆಗಳು ಇದೇ ಏರಿಯಾದಲ್ಲಿ ಇರೋದು. ಇದೊಂಥರಾ ಹಾಲಿವುಡ್ ನ ಬೆವರ್ಲಿ ಹಿಲ್ಸ್, ಬಾಲಿವುಡ್ ನ ಬಾಂದ್ರಾ ಮತ್ತು ಬೆಂಗಳೂರಿನ ಡಾಲರ್ಸ್ ಕಾಲೊನಿ ಥರದ ದುಬಾರಿ ಪ್ರದೇಶ. ಇಂಥಾ ಪೊಯೆಸ್ ಗಾರ್ಡನ್ ನಲ್ಲಿ ಇವತ್ತು ಒಂದು ಗುದ್ದಲಿ ಪೂಜೆ ನೆರವೇರಿತು, ನೆರವೇರಿಸಿದ್ದು ಸೂಪರ್ ಸ್ಟಾರ್ ರಜನಿಕಾಂತ್.
ಅಂದ್ಹಾಗೆ ಇಲ್ಲಿ ಮನೆ ಕಟ್ಟುತ್ತಿರೋದು ನಟ ಧನುಷ್ ಮತ್ತು ಪತ್ನಿ ಐಶ್ವರ್ಯ. ಐಶ್ವರ್ಯ ರಜನಿಕಾಂತ್ ಪುತ್ರಿ. ರಜನಿಕಾಂತ್ ಮನೆಯಿಂದ ಸ್ವಲ್ಪವೇ ದೂರದಲ್ಲಿರುವ ನಿವೇಶನವೊಂದನ್ನು ಖರೀದಿಸಿ ಮನೆ ಕಟ್ಟಿಸೋಕೆ ಆರಂಭಿಸಿದ್ದಾರೆ ಈ ದಂಪತಿ. ಈ ಪ್ರದೇಶದಲ್ಲಿ ಒಂದು 30-40 ಅಳತೆಯ ಸೈಟ್ ಕೊಳ್ಳೋಕೆ ಕನಿಷ್ಠ 7-8 ಕೋಟಿ ರೂಪಾಯಿಗಳಾದ್ರೂ ಬೇಕೇ ಬೇಕು. ಒಂದು ಚದರ ಅಡಿಯ ಬೆಲೆ 40,000 ರೂಪಾಯಿಗಳಿಗಿಂತಲೂ ಹೆಚ್ಚಿದೆ.
ಈ ಮನೆಗಾಗಿ ಧನುಷ್ ಸುಮಾರು 40 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ ಎನ್ನಲಾಗಿದೆ. ಅತ್ಯಾಧುನಿಕ ಸೌಕರ್ಯಗಳಿರುವ ಐಶಾರಾಮಿ ಬಂಗಲೆ ಇದಾಗಲಿದೆ. ಅನಾರೋಗ್ಯದ ನಂತರ ರಜನಿಕಾಂತ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿ. ಮಗಳು ಅಳಿಯನ ಹೊಸಾ ಮನೆಗೆ ಶುಭಕೋರಿದ್ದಾರೆ ತಲೈವಾ ದಂಪತಿ.