ಕೆಜಿಎಫ್ ಚಾಪ್ಟರ್ 2 ನೋಡಲು ಕಾದು ಕೂತಿರೋರೇನು ಕಮ್ಮಿಯಿಲ್ಲ. ಅದ್ಯಾವಾಗ ಸಿನಿಮಾ ನೋಡ್ತಿವೋ ಅಂತ ಹಾಟ್ ಸೀಟ್ನಲ್ಲಿ ಕೂತವ್ರಂತೆ ಟೆನ್ಷನ್ನಲ್ಲಿ ಸಾಕಷ್ಟು ಮಂದಿ ಇದ್ದಾರೆ. ಯಾಕಂದ್ರೆಮ ಕೆಜಿಎಫ್ ಮೊದಲ ಚಾಪ್ಟರ್ ಅಂತಹದ್ದೊಂದು ಇಮೇಜ್ ಹುಟ್ಟು ಹಾಕಿತ್ತು. ಕನ್ನಡ ಸಿನಿಮಾವೊಂದು ಈ ಮಟ್ಟಿಗೆ ಸದ್ದು ಮಾಡ್ಬಹುದು ಅನ್ನೋದನ್ನ ತೋರಿಸಿಕೊಟ್ಟಿತ್ತು. ಅದಕ್ಕಾಗೇ ಈಗ ಕೆಜಿಎಫ್ ಚಾಪ್ಟರ್ 2 ಗಾಗಿ ಕಾದು ಕೂತಿದ್ದಾರೆ. ಇಂತಹವ್ರಲ್ಲಿ ಅಮೆರಿಕಾದ ಕುಸ್ತಿ ಪಟು ಕೂಡ ಸೇರಿದ್ದಾರೆ.
ಅಂದ್ಹಾಗೆ ಅಮೆರಿಕಾದ ಕುಸ್ತಿಪಟುಗೂ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ಗೂ ಎತ್ತಣದಿಂದೆತ್ತಣ ಸಂಬಂಧ ಅಂತಿರಾ? ಮೊದ್ಲಿಗೆ ಅಮೆರಿಕಾದ ಆ ಕುಸ್ತಿಪಟು ಯಾರು ಅಂತ ಹೇಳ್ತಿವಿ. 34 ವರ್ಷದ ವಿಲ್ಲಿ ಮ್ಯಾಕ್ ಅಮೆರಿಕಾದ ಇಂಪ್ಯಾಕ್ಟ್ ರೆಸ್ಲಿಂಗ್ನ ಸ್ಟಾರ್ ಕುಸ್ತಿಪಟು. ಈತ ಕೆಲವು ದಿನಗಳ ಹಿಂದೆ ಕೆಜಿಎಫ್ ಮೊದಲ ಚಾಪ್ಟರ್ ನೋಡಿದ್ದಾನೆ. ಈ ಸಿನಿಮಾ ವಿಲ್ಲಿ ಮ್ಯಾಕ್ಗೆ ಬಹಳ ಇಷ್ಟ ಆಗಿದೆ. ಹೀಗಾಗಿ ಕೆಜಿಎಫ್ ಚಾಪ್ಟರ್ ಸಿನಿಮಾ ನೋಡೋಕೆ ಕಾಯುತ್ತಿದ್ದೇನೆ ಅಂತ ಟ್ವೀಟ್ ಮಾಡಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡಲು ನನಗೆ ಇನ್ನೂ ಕಾಯಲು ಸಾಧ್ಯವಿಲ್ಲ ಅಂತ ಬರೆದುಕೊಂಡಿದ್ದಾರೆ. ವಿಲ್ಲಿ ಮ್ಯಾಕ್ ಮಾಡಿದ ಟ್ವೀಟ್ ಈಗ ಎಲ್ಲಾ ಕಡೆ ಚರ್ಚೆಯಾಗ್ತಿದೆ. ವಿಲ್ಲಿ ಮ್ಯಾಕ್ ಅಮೆರಿಕಾದ ಸ್ಟಾರ್ ಕುಸ್ತಿಪಟು. ಈತನೇ ಕೆಜಿಎಫ್ 2 ನೋಡೋಕೆ ತುದಿಗಾಲಲ್ಲಿ ನಿಂತಿರೋದು ಅಚ್ಚರಿ ಮೂಡಿಸಿದೆ. ಆದ್ರೆ, ಕೆಜಿಎಫ್ ಸಿನಿಮಾ ಇಷ್ಟ ಪಟ್ಟಿದ್ದು ಯಾಕೆ? ಸಿನಿಮಾದಲ್ಲಿ ಏನೇನ್ ಇಷ್ಟ ಆಯ್ತು? ಅನ್ನೋದನ್ನ ಮಾತ್ರ ವಿಲ್ಲಿ ಮ್ಯಾಕ್ ಹೇಳಿಲ್ಲ.
ವಿಲ್ಲಿ ಮ್ಯಾಕ್ ಅದೆಷ್ಟೇ ಆತುರದಲ್ಲಿದ್ರೂ, ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೋದು ಜುಲೈ 16ರಂದೇ. ಹೀಗಾಗಿ ಅಲ್ಲಿವರೆಗೂ ಕಾಯದೇ ಬೇರೆ ವಿಧಿಯಿಲ್ಲ. ಸದ್ಯ ಯಶ್ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಅದೇ ಇನ್ನೊಂದ್ಕಡೆ ಪ್ರಶಾಂತ್ ನೀಲ್ ಸಲಾರ್ ಸಿನಿಮಾದ ಶೂಟಿಂಗ್ ಮಾಡ್ತಿದ್ದಾರೆ. ಹೀಗಾಗಿ ವಿಲ್ಲಿ ಮ್ಯಾಕ್ ಆಸೆ ಬಗ್ಗೆ ಇಬ್ಬರೂ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.