ಮೊನ್ ಮೊನ್ನೆ ಗೂಗಲ್ನಲ್ಲಿ ‘Ugliest Language of India’ ಎಂದು ಟೈಪ್ ಮಾಡಿದರೆ ಕನ್ನಡ ಎಂದು ತೋರಿಸುತ್ತಿತ್ತು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿ ಕೊನೆಗೆ ಗೂಗಲ್ ತನ್ನ ತಪ್ಪನ್ನ ಸರಿಪಡಿಸಿಕೊಂಡಿತ್ತು. ಅಷ್ಟೇ ಅಲ್ಲ ಕನ್ನಡಿಗರ ಕ್ಷಮೆ ಯಾಚಿಸಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಗೂಗಲ್ ಮತ್ತೊಂದು ಎಡವಟ್ಟು ಮಾಡಿ ಕನ್ನಡಿಗರನ್ನ ಕೆರಳಿಸಿದೆ. ತಮಿಳಿನ ವಿಕ್ರಮ್ ವೇದ (Vikram Veda) ಸಿನಿಮಾ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಕೊಟ್ಟರೆ ಸಿನಿಮಾ ಸ್ಟಾರ್ ಕಾಸ್ಟ ಲಿಸ್ಟ್ ನಲ್ಲಿ ನಟ ಸಾರ್ವಭೌಮ ರಾಜ್ ಕುಮಾರ್(Dr.Rajkumar) ಫೋಟೋ ಇದೆ. ಆದರೆ ಈ ಫೋಟೋ ಕೆಳಗೆ ಹಾಫ್ ಬಾಯಿಲ್ಡ್ (ಅರೆಬೆಂದ ಪಾತ್ರ) ಎಂದು ಅವಮಾನ ಮಾಡಲಾಗಿದೆ.
ಕನ್ನಡಿಗರಿಗೆ ಕನ್ನಡ ಬೇರೆ ಅಲ್ಲ, ಡಾ. ರಾಜ್ಕುಮಾರ್ ಬೇರೆ ಅಲ್ಲ. ಗೂಗಲ್ ಹೀಗೆ ಪದೇ ಪದೇ ಕನ್ನಡಕ್ಕೆ ಅವಮಾನ ಮಾಡುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ. ವಿಕ್ರಂ ವೇದ ಚಿತ್ರದಲ್ಲಿ ಹಾಫ್ ಬಾಯಿಲ್ಡ್ ಅನ್ನೋ ಪಾತ್ರ ಮಾಡಿರೋ ನಟನ ಹೆಸರು ರಾಜ್ ಕುಮಾರ್. ಹಾಗಂತ ಅಲ್ಲಿ ಅಣ್ಣಾವ್ರ ಫೋಟೋ ಹಾಕೋದು ಎಷ್ಟು ಸರಿ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗಿತ್ತು. ನಟ- ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಹಲವರು ಈ ಬಗ್ಗೆ ಕನ್ನಡಿಗರ ಗಮನ ಸೆಳೆದು ಗೂಗಲ್ ಗೆ ರಿಪೋರ್ಟ್ ಮಾಡಿ ತಪ್ಪು ಸರಿಪಡಿಸಲು ಆಗ್ರಹಿಸಲಾಗಿತ್ತು.
ಕೊನೆಗೂ ಗೂಗಲ್ ತಪ್ಪನ್ನ ಸರಿಪಡಿಸಿದೆ. ವಿಕ್ರಂ ವೇದ ಚಿತ್ರದ ಸ್ಟಾರ್ ಕಾಸ್ಟ್ ಲಿಸ್ಟ್ ನಲ್ಲಿ ಡಾ. ರಾಜ್ ಕುಮಾರ್ ಫೋಟೋ ತೆಗೆದು ನಿಜಕ್ಕೂ ಚಿತ್ರದಲ್ಲಿ ನಟಿಸಿರುವ ತಮಿಳು ಸಹನಟ ರಾಜ್ ಕುಮಾರ್ ಫೋಟೋ ಹಾಕಿದೆ. ಮಾಡಿದ ತಪ್ಪಿಗೆ ಯಾವಾಗ ಕ್ಷಮೆ ಕೇಳುತ್ತಾರೆ ಅಂತ ನೋಡ್ಬೇಕು.